ನವದೆಹಲಿ: ರಾಷ್ಟ್ರದಾದ್ಯಂತ 4ಜಿ ಟೆಲಿಕಾಂ ನೆಟ್‌ವರ್ಕ್ ಸೇವೆ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದ್ದು, ಸುಮಾರು 1.12 ಲಕ್ಷ ಟವರ್‌ಗಳನ್ನು ಅಳವಡಿಸಲು ಯೋಜನೆ ರೂಪಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಬುಧವಾರ ಹೇಳಿದರು.
'ಶೀಘ್ರದಲ್ಲೇ 4ಜಿ ನೆಟ್‌ವರ್ಕ್ ಸೇವೆಗೆ ಲಭ್ಯವಿರಲಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ಭಾರತೀಯ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಈ ನೆಟ್‌ವರ್ಕ್‌ಅನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ನಾವು 4ಜಿ ನೆಟ್‌ವರ್ಕ್ ಅನ್ನು ಅಭಿವೃದ್ಧಿ ಪಡಿಸಿರುವುದನ್ನು ವಿಶ್ವದಾದ್ಯಂತ ಶ್ಲಾಘಿಸಲಾಗುತ್ತಿದೆ. ಇದು ಕೋರ್ ನೆಟ್‌ವರ್ಕ್, ರೇಡಿಯೋ ನೆಟ್‌ವರ್ಕ್ ಒಳಗೊಂಡಂತೆ ಸುಸಜ್ಜಿತ ದೂರಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ' ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅಶ್ವಿನಿ ವೈಷ್ಣವ್ ತಿಳಿಸಿದರು.
'ಬಿಎಸ್‌ಎನ್‌ಎಲ್ ಈ ಕೂಡಲೇ 6,000 ಟವರ್‌ಗಳನ್ನು ಅಳವಡಿಸಲಾಗುವುದು. ನಂತರ 6,000ಕ್ಕೂ ಹೆಚ್ಚು ಟವರ್‌ಗಳನ್ನು ಅಳವಡಿಸಲಾಗುವುದು. ಬಳಿಕ ಅಂತಿಮವಾಗಿ 4ಜಿ ನೆಟ್‌ವರ್ಕ್ ಸೇವೆಗೆ ರಾಷ್ಟ್ರದಾದ್ಯಂತ 1 ಲಕ್ಷ ಟವರ್‌ಗಳನ್ನು ಅಳವಡಿಸಲಾಗುವುದು' ಎಂದು ಅಶ್ವಿನಿ ವೈಷ್ಣವ್ ಹೇಳಿದರು.
'ಇದರ ಜೊತೆಯಲ್ಲೇ 5ಜಿ ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಿದೆ. ಕೆಲವೇ ತಿಂಗಳಲ್ಲಿ ಸಿದ್ಧವಾಗಲಿದೆ' ಎಂದರು.
ರೈಲಿನೊಳಗೆ 4ಜಿ ನೆಟ್‌ವರ್ಕ್ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಶ್ನಿಸಿದಾಗ, 5ಜಿ ನೆಟ್‌ವರ್ಕ್ ಲಭ್ಯವಿದ್ದರಷ್ಟೇ ರೈಲಿನೊಳಗೆ ಇಂಟರ್‌ನೆಟ್ ಸಂಪರ್ಕ ನೀಡಲು ಸಾಧ್ಯ. ರೈಲು 100 ಕಿ.ಮೀ. ವೇಗದಲ್ಲಿ ಚಲಿಸುವಾಗ 4ಜಿ ನೆಟ್‌ವರ್ಕ್ ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಸಂಪರ್ಕ ಕಡಿತಗೊಳ್ಳುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.