ADVERTISEMENT

ಸೇವಾ ಶುಲ್ಕ ಏರಿಸಲ್ಲ: ಬಿಎಸ್ಎನ್‌ಎಲ್‌

ಪಿಟಿಐ
Published 22 ಅಕ್ಟೋಬರ್ 2024, 15:44 IST
Last Updated 22 ಅಕ್ಟೋಬರ್ 2024, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ಮೊಬೈಲ್‌ ಸೇವಾ ಶುಲ್ಕವನ್ನು ಏರಿಕೆ ಮಾಡುವುದಿಲ್ಲ’ ಎಂದು ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಸ್ಪಷ್ಟಪಡಿಸಿದೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ಎನ್‌ಎಲ್‌ ಅಧ್ಯಕ್ಷ ಮತ್ತು ಸಿಇಒ ರಾಬರ್ಟ್‌ ರವಿ, ‘ನಮ್ಮ ಗ್ರಾಹಕರು ಸಂತೋಷವಾಗಿರುವುದನ್ನು ನೋಡುವುದೇ ನಮ್ಮ ಉದ್ದೇಶ. ಅವರ ವಿಶ್ವಾಸ ಗೆಲ್ಲುವುದೇ ನಮ್ಮ ಪ್ರಧಾನ ಆದ್ಯತೆಯಾಗಿದೆ. ಹಾಗಾಗಿ, ಶುಲ್ಕ ಏರಿಕೆಗೆ ಕ್ರಮಕೈಗೊಳ್ಳುವುದಿಲ್ಲ. ಸದ್ಯ ಅಂತಹ ಅಗತ್ಯವೂ ಇಲ್ಲ’ ಎಂದು ಹೇಳಿದರು.

‘ಈಗಾಗಲೇ, ಬಿಎಸ್‌ಎನ್‌ಎಲ್‌ನ 4ಜಿ ಸೇವೆಯ ಪ್ರಾಯೋಗಿಕ ಪರೀಕ್ಷೆ ಆರಂಭಿಸಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದೇ ನಮ್ಮ ಮೊದಲ ಗುರಿ. ಇದೇ ವರ್ಷದಲ್ಲಿ ದೇಶದಾದ್ಯಂತ 4ಜಿ ವಾಣಿಜ್ಯ ಸೇವೆ ಆರಂಭಕ್ಕೆ ಚಾಲನೆ ದೊರೆಯಲಿದೆ’ ಎಂದು ವಿವರಿಸಿದರು.

ADVERTISEMENT

ಈಗಾಗಲೇ, ಖಾಸಗಿ ವಲಯದ ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌, ವೊಡೊಫೋನ್‌ ಐಡಿಯಾ ಕಂಪನಿಗಳು ಮೊಬೈಲ್‌ ಸೇವಾ ಶುಲ್ಕವನ್ನು ಏರಿಕೆ ಮಾಡಿವೆ. 

ಲೊಗೊ ಬದಲಾವಣೆ

ಕೇಂದ್ರ ಸರ್ಕಾರವು ಭಾರತ ಸಂಚಾರ ನಿಗಮದ ಲೊಗೊವನ್ನು ಬದಲಾವಣೆ ಮಾಡಿದೆ. ಲೊಗೊದ ಥೀಮ್‌ಗೆ ಕಿತ್ತಳೆ ಬಣ್ಣ ಅಳವಡಿಸಲಾಗಿದೆ. ಇದು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.  ಲೊಗೊದಲ್ಲಿ ದೇಶದ ಏಕತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿವೆ. ಈ ಮೊದಲ ಲೊಗೊ ಕೆಳಗೆ ‘ಕನೆಕ್ಟಿಂಗ್‌ ಇಂಡಿಯಾ’ ಎಂದು ಅಡಿಬರಹವಿತ್ತು. ಇದನ್ನು ‘ಕನೆಕ್ಟಿಂಗ್‌ ಭಾರತ’ ಎಂದು ಬದಲಾಯಿಸಲಾಗಿದೆ. ಹೊಸ ಲೊಗೊ ‘ಸುರಕ್ಷಿತ ವಿಶ್ವಾಸಾರ್ಹ ಕೈಗೆಟುಕುವ’ ಘೋಷವಾಕ್ಯ ಒಳಗೊಂಡಿದೆ. ಇದು ಉತ್ತಮ ಸಂಪರ್ಕ ಸೇವೆ ಒದಗಿಸುವ ಬದ್ಧತೆಯ ಸಂಕೇತವಾಗಿದೆ’ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.