ADVERTISEMENT

ಬಿಎಸ್ಎನ್‌ಎಲ್‌ಗೆ ₹5,371 ಕೋಟಿ ನಷ್ಟ: ಕೇಂದ್ರ ಸರ್ಕಾರ

ಪಿಟಿಐ
Published 24 ಜುಲೈ 2024, 15:34 IST
Last Updated 24 ಜುಲೈ 2024, 15:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌), ₹5,371 ಕೋಟಿ ನಷ್ಟ ಅನುಭವಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸರ್ಕಾರವು ಬಿಎಸ್‌ಎನ್‌ಎಲ್‌ ಮತ್ತು ಮಹಾನಗರ ಟೆಲಿಕಾಂ ನಿಗಮ ಲಿಮಿಟೆಡ್‌ (ಎಂಟಿಎನ್‌ಎಲ್‌) ಪುನರುಜ್ಜೀವನಕ್ಕೆ ವಿಶೇಷ ಪ್ಯಾಕೇಜ್‌ಗಳನ್ನು ಘೋಷಿಸಿದೆ ಎಂದು ಕೇಂದ್ರ ಸಂವಹನ ಖಾತೆಯ ರಾಜ್ಯ ಸಚಿವ ಪೆಮ್ಮಸಾನಿ ಚಂದ್ರಶೇಖರ್, ಬುಧವಾರ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಆತ್ಮನಿರ್ಭರ ಭಾರತ ಯೋಜನೆಯಡಿ 4ಜಿ ತಂತ್ರಜ್ಞಾನ ಅನುಷ್ಠಾನಕ್ಕೆ ಬಿಎಸ್‌ಎನ್‌ಎಲ್‌ ಒಂದು ಲಕ್ಷ ಪ್ರದೇಶಗಳಲ್ಲಿ 4ಜಿ ಟವರ್‌ ಅಳವಡಿಕೆಗೆ ನಿರ್ಧರಿಸಿದೆ. ಈ ಉಪಕರಣಗಳನ್ನು 5ಜಿ ಸೇವೆ ಒದಗಿಸಲು ಅನುಕೂಲವಾಗುವಂತೆ ಅಪ್‌ಡೇಟ್‌ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. 

ADVERTISEMENT

2023–24ರಲ್ಲಿ ಬಿಎಸ್‌ಎನ್‌ಎಲ್‌ನ ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ನಂತರದ ಆದಾಯವು ₹2,164‌ ಕೋಟಿ ಆಗಿದೆ. 2022–23ರಲ್ಲಿ ಬಿಎಸ್‌ಎನ್‌ಎಲ್‌ ₹8,161 ಕೋಟಿ ನಷ್ಟ ಅನುಭವಿಸಿತ್ತು.

2019ರಲ್ಲಿ ಸರ್ಕಾರವು ಬಿಎಸ್ಎನ್‌ಎಲ್‌ ಪುನಶ್ಚೇತನಕ್ಕೆ ₹69 ಸಾವಿರ ಕೋಟಿ, 2022ರಲ್ಲಿ ₹1.64 ಲಕ್ಷ ಕೋಟಿ ಹಾಗೂ 2023ರಲ್ಲಿ 4ಜಿ/5ಜಿ ತರಂಗಾಂತರ ಖರೀದಿಗೆ ನೆರವಾಗಲು ₹89 ಸಾವಿರ ಕೋಟಿ ಪ್ಯಾಕೇಜ್‌ ಘೋಷಿಸಿತ್ತು.

ದತ್ತಾಂಶ ಸೋರಿಕೆ ತಡೆಗೆ ಕ್ರಮ

ಬಿಎಸ್‌ಎಲ್‌ಎನ್‌ನಲ್ಲಿ ಬಳಕೆದಾರರ ದತ್ತಾಂಶ ಸೋರಿಕೆ ಸಂಬಂಧ ಮಾರ್ಚ್ 20ರಂದು ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆಸ್ಸಿ ರೆಸ್ಪಾನ್ಸ್‌ ಟೀಂ ವರದಿ ಸ‌ಲ್ಲಿಸಿದೆ ಎಂದು ಸಚಿವ ಚಂದ್ರಶೇಖರ್ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ರೆಸ್ಪಾನ್ಸ್‌ ಟೀಂ ಅಧಿಕಾರಿಗಳು ಕೆಲವು ದತ್ತಾಂಶ ಹಂಚಿಕೊಂಡಿದ್ದರು. ಈ ದತ್ತಾಂಶವು ಸರ್ವರ್‌ನಿಂದ ಕಂಪ್ಯೂಟರ್‌ ನೆಟ್‌ವರ್ಕ್‌ಗೆ ಫೈಲ್‌ಗಳನ್ನು ವರ್ಗಾಯಿಸಲು ಬಳಸುವ ಬಿಎಸ್‌ಎನ್‌ಎಲ್‌ ಫೈಲ್‌ ಟ್ರಾನ್ಸ್‌ಫರ್‌ ಪೋಟ್ರೊಕಾಲ್‌ನ (ಎಫ್‌ಟಿಪಿ) ದತ್ತಾಂಶಕ್ಕೆ ಹೋಲಿಕೆಯಾಗಿದ್ದವು. ಹಾಗಾಗಿ ಆ ಸರ್ವರ್‌ ಅನ್ನು ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.  ದತ್ತಾಂಶ ಸೋರಿಕೆ ತಡೆ ಸಂಬಂಧ ಆಂತರಿಕ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.