ನವದೆಹಲಿ: ‘2019–20ನೆ ಹಣಕಾಸು ವರ್ಷದ ಬಜೆಟ್‌ನಲ್ಲಿನ ಪ್ರತಿಯೊಂದು ಅಂದಾಜು ವಾಸ್ತವಾಂಶದಿಂದ ಕೂಡಿದ್ದು, ಕೃಷಿಗೆ ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.
‘ಮುಂದಿನ 5 ವರ್ಷಗಳಲ್ಲಿ ದೇಶಿ ಆರ್ಥಿಕತೆಯ ಗಾತ್ರವನ್ನು ಸದ್ಯದ ₹ 187 ಲಕ್ಷ ಕೋಟಿಗಳಿಂದ ₹ 350 ಲಕ್ಷ ಕೋಟಿಗೆ ಹೆಚ್ಚಿಸಲು ಅಗತ್ಯವಾದ ಬಂಡವಾಳ ಹೂಡಿಕೆ ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಗೆ ಅವರು ಉತ್ತರಿಸುತ್ತಿದ್ದರು.
‘ರಕ್ಷಣೆ, ಪಿಂಚಣಿ, ನೌಕರರ ಸಂಬಳ, ಆಂತರಿಕ ಭದ್ರತೆಗೆ ಸಂಬಂಧಿಸಿದ ವೆಚ್ಚಗಳಿಗೆ ಅಗತ್ಯ ಇರುವಷ್ಟು ಹಣ ಒದಗಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಮತ್ತು ತೆರಿಗೆಯೇತರ ವರಮಾನ ಸಂಗ್ರಹಿಸಲು ಗಮನ ಕೇಂದ್ರೀಕರಿಸಲಾಗಿದೆ. ವರಮಾನ ವೃದ್ಧಿಗೆ ರಾಜಿ ಮಾಡಿಕೊಳ್ಳದೆ ಬಂಡವಾಳ ಹೂಡಿಕೆ ಹೆಚ್ಚಿಸಲು ಬಜೆಟ್‌ನಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.
‘ಬಜೆಟ್ ಪ್ರಸ್ತಾವಗಳನ್ನು ಪೂರ್ವಯೋಜನೆ ಇಲ್ಲದೇ ಸಿದ್ಧಪಡಿಸಲಾಗಿಲ್ಲ. ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಯನ್ನು ಇನ್ನಷ್ಟು ಉದಾರೀಕರಣಗೊಳಿಸಲಾಗಿದೆ. ವಾರ್ಷಿಕ ₹ 400 ಕೋಟಿ ವಹಿವಾಟು ನಡೆಸುವ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ 25ಕ್ಕೆ ತಗ್ಗಿಸಲಾಗಿದೆ. ವಿದ್ಯುತ್‌ಚಾಲಿತ ವಾಹನಗಳ ಮೇಲಿನ ತೆರಿಗೆ ಕಡಿತ ಮಾಡಲಾಗಿದೆ. ರಿಟೇಲ್ ವ್ಯಾಪಾರಿಗಳಿಗೂ ಪಿಂಚಣಿ ಯೋಜನೆ ವಿಸ್ತರಿಸಲಾಗಿದೆ. ಮೂಲ ಸೌಕರ್ಯ ವಲಯದಲ್ಲಿ ಮುಂದಿನ 5 ವರ್ಷಗಳಲ್ಲಿ ₹ 100 ಲಕ್ಷ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ.
ಪೂರಕ ಕ್ರಮಗಳು: ‘ಕೆಲ ಕಚ್ಚಾ ಸರಕುಗಳ ಮೇಲಿನ ಆಮದು ಸುಂಕ ಕಡಿತ, ರೈತರಿಗೆ ನಗದು ಬೆಂಬಲದ ವಿಸ್ತರಣೆ, ಹೂಡಿಕೆ ಮತ್ತು ಬೆಳವಣಿಗೆ ಸಂಬಂಧ ಸಂಪುಟ ಸದಸ್ಯರ ಸಮಿತಿ ರಚನೆ ಮುಂತಾದವು ಆರ್ಥಿಕ ಬೆಳವಣಿಗೆಗೆ ಪೂರಕವಾದ ಕ್ರಮಗಳಾಗಿವೆ’ ಎಂದು ವಿವರಿಸಿದ್ದಾರೆ.
ತೆರಿಗೆ ಸಂಗ್ರಹ ಅಂದಾಜುಗಳು ಈಡೇರಲಾರವು ಎಂದಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಹೇಳಿಕೆಯನ್ನು ನಿರ್ಮಲಾ ಅಲ್ಲಗಳೆದಿದ್ದಾರೆ. ‘ಆದಾಯ ತೆರಿಗೆ, ಅಬಕಾರಿ ಮತ್ತು ಜಿಎಸ್‌ಟಿ ಸಂಗ್ರಹದ ಗುರಿ ಈಡೇರಲಿವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ₹ 2ರಷ್ಟು ಅಬಕಾರಿ ಸುಂಕದಿಂದಾಗಿ ಎಕ್ಸೈಸ್ ಸಂಗ್ರಹ ಏರಿಕೆಯಾಗಲಿದೆ. ರಿಟರ್ನ್ಸ್ ಸಲ್ಲಿಕೆಯ ಸರಳೀಕರಣ ಮತ್ತು ತೆರಿಗೆ ತಪ್ಪಿಸುವುದರ ಮೇಲಿನ ನಿಗಾ ವ್ಯವಸ್ಥೆಯಿಂದ ಜಿಎಸ್‌ಟಿ ಸಂಗ್ರಹ ಶೇ 14ರಷ್ಟು ಹೆಚ್ಚಲಿದೆ. ಕ್ಷಮಾದಾನ ಯೋಜನೆಯಿಂದಲೂ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.