ಬೆಂಗಳೂರು: ‘ದೇಶಿ ವಿಮೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು 2021–22ನೇ ಸಾಲಿನ ಬಜೆಟ್‌ನಲ್ಲಿ ಈ ಹಿಂದಿನ ಶೇ 49ರಿಂದ ಶೇ 74ಕ್ಕೆ ಹೆಚ್ಚಿಸಿರುವುದು ವಿಮೆ ವಹಿವಾಟಿನ ಬೆಳವಣಿಗೆಗೆ ಭಾರಿ ಉತ್ತೇಜನ ನೀಡಲಿದೆ’ ಎಂದು ಎಡೆಲ್‌ವೇಸ್ ಟೋಕಿಯೊ ಲೈಫ್ ಇನ್ಶುರೆನ್ಸ್‌ನ ಸಿಇಒ ಸುಮಿತ್ ರೈ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಕೋವಿಡ್–19 ಪಿಡುಗಿನಿಂದಾಗಿ ಜೀವವಿಮೆ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡುತ್ತಿದೆ. ಜೀವವಿಮೆ ಸೌಲಭ್ಯ ಪಡೆಯುವುದರ ಅಗತ್ಯ ಈಗ ಹೆಚ್ಚಿನ ಜನರಿಗೆ ಮನದಟ್ಟಾಗುತ್ತಿದೆ. ಇದರಿಂದಾಗಿ ವಿಮೆ ಉತ್ಪನ್ನಗಳ ವಿತರಣೆ ವ್ಯಾಪ್ತಿಯು ಗಮನಾರ್ಹವಾಗಿ ಹಿಗ್ಗಲಿದೆ. ಗ್ರಾಹಕರಿಗೆ ಒದಗಿಸುವ ಸೇವೆಯಲ್ಲಿ ತಂತ್ರಜ್ಞಾನದ ಬಳಕೆಯಲ್ಲಿ ಹೆಚ್ಚಳವಾಗಲಿದೆ. ವಿಮೆ ಕ್ಷೇತ್ರವು ತನ್ನ ಕಾರ್ಯವ್ಯಾಪ್ತಿಯನ್ನು ವ್ಯಾಪಕವಾಗಿ ವಿಸ್ತರಿಸುವುದಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ ಹೆಚ್ಚಳವು ನೆರವಾಗಲಿದೆ. ದೇಶದಲ್ಲಿ ವಿಮೆ ಸೇವಾ ಸೌಲಭ್ಯವು 2019ರಲ್ಲಿ ಶೇ 3.76ರಷ್ಟಿತ್ತು. ಮುಂಬರುವ ವರ್ಷಗಳಲ್ಲಿ ಈ ದರ ಗಮನಾರ್ಹವಾಗಿ ಬದಲಾಗಲಿದೆ‘ ಎಂದು ಅವರು ಬಹುವಾಗಿ ನಿರೀಕ್ಷಿಸಿದ್ದಾರೆ.
‘ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಕೊಡುಗೆ ನೀಡುವ ಮೂಲಸೌಕರ್ಯದಂತಹ ದೀರ್ಘಾವಧಿ ಯೋಜನೆಗಳ ಜತೆ ವಿಮೆ ಕ್ಷೇತ್ರವು ನಿಕಟ ಸಂಬಂಧ ಹೊಂದಿದೆ. ವಿಮೆ ವಹಿವಾಟಿಗೆ ಮೂಲತಃ ಹೆಚ್ಚಿನ ಬಂಡವಾಳದ ಅಗತ್ಯ ಇರಲಿದೆ. ಎಫ್‌ಡಿಐ ಮಿತಿ ಹೆಚ್ಚಳವು ಈ ಅಗತ್ಯವನ್ನು ಈಡೇರಿಸಲಿದೆ. ಈ ಕ್ಷೇತ್ರದಲ್ಲಿನ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವು ದೇಶಿ ಮೂಲಸೌಕರ್ಯ ವಲಯವನ್ನು ಬಲಪಡಿಸುವುದಕ್ಕೂ ನೆರವಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಬಂಡವಾಳವು ದೇಶದ ಒಳಗೆ ಹರಿದು ಬರುವುದರಿಂದ ದೇಶದ ವಿದೇಶಿ ವಿನಿಮಯ ಪರಿಸ್ಥಿತಿಯೂ ಸುಧಾರಣೆಯಾಗಲಿದೆ.
‘ಮುಂಬರುವ ದಿನಗಳಲ್ಲಿ ಈ ಅಭಿವೃದ್ಧಿಯ ಚಿತ್ರಣವು ಯಾವ ಬಗೆಯಲ್ಲಿ ಅನಾವರಣಗೊಳ್ಳಲಿದೆ ಮತ್ತು ಅದರಿಂದ ವಿಮೆ ಕ್ಷೇತ್ರದ ಮೇಲೆ ಆಗಲಿರುವ ಸಕಾರಾತ್ಮಕ ಪರಿಣಾಮಗಳನ್ನು ನಿರೀಕ್ಷಿಸುವುದು ಆಸಕ್ತಿದಾಯಕ ವಿದ್ಯಮಾನವಾಗಿದೆ. ಎಲ್ಲ ಬಗೆಯ ಕೆಲಸಗಾರರಿಗೆ ಕನಿಷ್ಠ ವೇತನ ಅನ್ವಯಿಸಿರುವುದು ಮತ್ತು ಅವರನ್ನೆಲ್ಲ ಉದ್ಯೋಗಿಗಳ ರಾಜ್ಯ ವಿಮೆ ನಿಗಮದ ವ್ಯಾಪ್ತಿಗೆ ತರಲಿರುವುದು ಆರ್ಥಿಕ ಸೇರ್ಪಡೆಯನ್ನು ಸುಧಾರಿಸುವುದರ ಜತೆಗೆ ದೊಡ್ಡ ಪ್ರಮಾಣದ ಜನಸಂಖ್ಯೆಯನ್ನು ವಿಮೆ ವ್ಯಾಪ್ತಿಗೆ ತರುವುದಕ್ಕೂ ನೆರವಾಗಲಿದೆ‘ ಎಂದು ಅವರು ವಿಶ್ಲೇಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.