ಬೆಂಗಳೂರು: ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆಗೆ ಒತ್ತು ಕೊಡುವ ಭರದಲ್ಲಿ ವಿತ್ತೀಯ ಕೊರತೆ ಹೆಚ್ಚಳಗೊಳ್ಳುವ ಅಪಾಯ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿತ್ತೀಯ ಕೊರತೆಗೆ ಕಡಿವಾಣ ಹಾಕುವ ಬದಲಿಗೆ ಜನಸಾಮಾನ್ಯರ ಕೈಗೆ ಹೆಚ್ಚು ಹಣ ನೀಡಲು ಮುಂದಾಗಬಹುದು. ಇದರಿಂದಾಗಿ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.4ಕ್ಕೆ ಮಿತಿಗೊಳಿಸುವ ಉದ್ದೇಶ ಈಡೇರುವ ಸಾಧ್ಯತೆ ಇಲ್ಲ. ವಿತ್ತೀಯ ಕೊರತೆ ಪ್ರಮಾಣವು ಶೇ 3.6ಕ್ಕೆ ಏರಬಹುದು ಎಂದೂ ಮೂಲಗಳು ತಿಳಿಸಿವೆ.
ವಿತ್ತೀಯ ಕೊರತೆಯು ಒಟ್ಟು ವರಮಾನ ಮತ್ತು ಒಟ್ಟಾರೆ ವೆಚ್ಚದ ನಡುವಣ ಅಂತರವಾಗಿದೆ. ಗರಿಷ್ಠ ಪ್ರಮಾಣದ ವಿತ್ತೀಯ ಕೊರತೆಯು ಖಾಸಗಿ ಬಂಡವಾಳ ಹೂಡಿಕೆ, ಕೌಟುಂಬಿಕ ಉಳಿತಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಣದುಬ್ಬರಕ್ಕೆ ಕಾರಣವಾಗಿ ಆರ್ಥಿಕ ಪ್ರಗತಿ ಕುಂಠಿತಗೊಳಿಸಲಿದೆ.
ಆರ್ಥಿಕತೆಯ ಎಲ್ಲ ಚಟುವಟಿಕೆಗಳು ಮಂದಗತಿಯಲ್ಲಿ ಇರುವಾಗ, ವಿತ್ತೀಯ ಕೊರತೆ ಹೆಚ್ಚಳವು ಆರ್ಥಿಕ ಪ್ರಗತಿಗೆ ಅಗತ್ಯವಾದ ಉತ್ತೇಜನ ನೀಡಲಿದೆ.
ಈ ಕೊರತೆಯನ್ನು ಸ್ಥಳೀಯ ಮತ್ತು ಬಾಹ್ಯ ಸಾಲ ಎತ್ತುವ ಅಥವಾ ಹಣ ಮುದ್ರಿಸುವ ಮೂಲಕ ಸರಿದೂಗಿಸಬಹುದು. ದೇಶಿಯವಾಗಿ ಸಾಲ ಸಂಗ್ರಹಿಸುವುದರಿಂದ ಬಡ್ಡಿ ದರ ಹೆಚ್ಚಳಗೊಂಡರೆ, ವಿದೇಶಿ ಸಾಲವು ಪಾವತಿ ಸಮತೋಲನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ನೋಟುಗಳನ್ನು ಮುದ್ರಿಸಿದರೆ ಹಣದುಬ್ಬರ ಏರಿಕೆಯಾಗಲಿದೆ.
ದೇಶಿ ಆರ್ಥಿಕತೆ ಕಳೆದ ಐದು ವರ್ಷಗಳಲ್ಲಿ ತೀವ್ರ ಸ್ವರೂಪದ ಕುಂಠಿತ ಪ್ರಗತಿ ಕಾಣುತ್ತಿದೆ. ಖಾಸಗಿ ಬಂಡವಾಳ ಹೂಡಿಕೆ ಮತ್ತು ಗ್ರಾಹಕರ ಬೇಡಿಕೆ ಸ್ಥಗಿತಗೊಂಡಿದೆ. ಈ ಸವಾಲುಗಳನ್ನು ನಿರ್ಮಲಾ ಹೇಗೆ ನಿರ್ವಹಿಸಲಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.