ಬೆಂಗಳೂರು:‘2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ರೈತ ವಿರೋಧಿಮತ್ತು ಯುವಜನ ವಿರೋಧಿಆಗಿದೆ.ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್‌ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
‘ಕೇಂದ್ರ ಹಣಕಾಸು ಸಚಿವರು ತಮ್ಮ ಮಧ್ಯಂತರ ಬಜೆಟ್‌ನಲ್ಲಿಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’ಹೆಸರಿನ ಹೊಸ ಯೋಜನೆ ಘೋಷಿಸಿದ್ದಾರೆ. ಇದಕ್ಕಾಗಿ ನಾನು 2018-19ರ ಬಜೆಟ್‌ನಲ್ಲಿಪ್ರಕಟಿಸಿದ್ದ ರೈತ ಬೆಳಕು’ಯೋಜನೆಯನ್ನೇ ಅರ್ಧಕ್ಕದರ್ಧ ಕಾಪಿ ಹೊಡೆದಿದ್ದಾರೆ.ಕಿಸಾನ್ ಸಮ್ಮಾನ್ ಯೋಜನೆಯ ಪ್ರಕಾರ 2 ಹೆಕ್ಟೇರ್‌ಗಿಂತಕಡಿಮೆ ಹಿಡುವಳಿಯ ರೈತರಿಗೆ ಮೂರು ಕಂತುಗಳಲ್ಲಿ ₹6 ಸಾವಿರ ನೀಡಲಾಗುವುದು ಎಂದು ಹೇಳಿದ್ದಾರೆ.ನಮ್ಮ ಯೋಜನೆಯ ಪ್ರಕಾರ ಹೆಕ್ಟೇರ್ ಗೆ ರೂ.5000 ನೀಡಲಾಗುತ್ತದೆ’ಎಂದು ಟ್ವಿಟ್‌ನಲ್ಲಿ ವಿಶ್ಲೇಷಿಸಿದ್ದಾರೆ.
‘ಶೇಕಡಾ 17.4ರ ಪ್ರಮಾಣದ ನಿರುದ್ಯೋಗ ದೇಶದ ಈಗಿನ ಜ್ವಲಂತ ಸಮಸ್ಯೆ. ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ಯಾವ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದು ನೀಡಿದ್ದ ಆಶ್ವಾಸನೆಯ ಬಗ್ಗೆ ಇಡೀ ಬಜೆಟ್ ನಲ್ಲಿ ಸೊಲ್ಲೆತ್ತಿಲ್ಲ. ಇದು ಯುವಜನ ವಿರೋಧಿ ಬಜೆಟ್’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಜನರು ನಂಬಲ್ಲ
ರಾಯಚೂರು: ‘ಚುನಾವಣೆ ಉದ್ದೇಶ ಇಟ್ಟುಕೊಂಡು ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್ ಮಂಡಿಸಿದೆ. ಹಿಂದಿನ ಚುನಾವಣೆಯಲ್ಲಿ ಹೇಳಿದ್ದ ಕೆಲಸಗಳನ್ನು ಐದು ವರ್ಷಗಳಾದರೂ ಅವರು ಮಾಡಿಲ್ಲ. ಜನರು ಕೇಂದ್ರ ಸರ್ಕಾರವನ್ನು ಯಾವುದೇ ಕಾರಣಕ್ಕೂ ನಂಬೋದಿಲ್ಲ’ ಎಂದು ಸಿದ್ದರಾಮಯ್ಯ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದರು.
ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ನಗರಕ್ಕೆ ಭಂದಿರುವ ಅವರು, ‘ಇದು ಬಿಜೆಪಿಯ ಚುನಾವಣೆ ಪ್ರಣಾಳಿಕೆ.ಎರಡು ಕೋಟಿ ಉದ್ಯೋಗ ಸೃಷ್ಟಿ, ಕಪ್ಪುಹಣ ತರುವುದು, ಲೋಕಪಾಲ್ ನೇಮಕ ವಿಚಾರದಲ್ಲಿ ಬಿಜೆಪಿ ವಿಫಲವಾಗಿದೆ.ರಫೆಲ್ ಹಗರಣ ನೋಡಿ ಜನರು ಬೇಸತ್ತಿದ್ದಾರೆ. ಈ ಬಜೆಟ್ ಮೂಲಕ ಜನರನ್ನು ಮರಳು ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ. ಇವರನ್ನು ನಿಶ್ವಿತವಾಗಿ ಯಾರೂ ನಂಬೋದಿಲ್ಲ’ ಎಂದರು.
ಜುಮ್ಲಾ ಬಜೆಟ್: ದಿನೇಶ್ ಗುಂಡೂರಾವ್
ನಾಲ್ಕು ವರ್ಷಗಳಿಂದ ಜುಮ್ಲಾ ಹೇಳಿಕೆಗಳನ್ನು ನೀಡಿದ ರೀತಿಯಲ್ಲೇ, ಈಗ ಕೇಂದ್ರ ಸರ್ಕಾರ ಜುಮ್ಲಾ ಬಜೆಟ್ ನೀಡಿದೆ. ಅನೇಕ ರಾಜ್ಯಗಳಲ್ಲಿ ಬರಗಾಲವಿತ್ತು. ಹೀಗಾಗಿ ಬಜೆಟ್ ಕುರಿತು ಸಾಕಷ್ಟು ನೀರಿಕ್ಷೆಗಳಿದ್ದವು. ಜನರ ನಿರೀಕ್ಷೆಗಳೆಲ್ಲ ಸುಳ್ಳಾಗಿವೆ. ಅಸಂಘಟಿತ ಕಾರ್ಮಿಕರನ್ನು ಐದು ವರ್ಷಗಳಿಂದ ನಿರ್ಲಕ್ಷಿಸುತ್ತಾ ಬಂದಿದ್ದು, ಈಗ ಪಿಂಚಣಿ ಯೋಜನೆ ಘೋಷಿಸಿ ಮೂಗಿಗೆ ತುಪ್ಪ ಸವರಿದ್ದಾರೆ. ಹೇಗೆ ಕಾರ್ಯಗತ ಮಾಡುತ್ತಾರೆ ಎನ್ನುವುದು ಮುಖ್ಯ. ಅಧಿಕಾರ ಮುಗಿದ ಬಳಿಕ ಯೋಜನೆಗಳನ್ನು ಘೋಷಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಯಾರೂ ನಂಬುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.