ADVERTISEMENT

ಭಾರತದಲ್ಲಿ ವಾಣಿಜ್ಯೋದ್ಯಮ: ಮರಳಿದ ವಿಶ್ವಾಸ

ಪಿಟಿಐ
Published 20 ಸೆಪ್ಟೆಂಬರ್ 2020, 14:55 IST
Last Updated 20 ಸೆಪ್ಟೆಂಬರ್ 2020, 14:55 IST
ಉದ್ಯಮ–ಪ್ರಾತಿನಿಧಿಕ ಚಿತ್ರ
ಉದ್ಯಮ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರಗಳು ಲಾಕ್‌ಡೌನ್‌ ನಿಯಮಗಳನ್ನು ಸಡಿಲಗೊಳಿಸಿ, ಆರ್ಥಿಕ ಮತ್ತು ವಾಣಿಜ್ಯಿಕ ಚಟುವಟಿಕೆಗಳು ಚೇತರಿಕೆ ಕಂಡ ನಂತರ ಭಾರತದ ಉದ್ಯಮಗಳಲ್ಲಿ ಹೊಸ ಆಶಾಭಾವನೆ ಚಿಗುರಿದೆ.

ಏಪ್ರಿಲ್‌–ಜೂನ್‌ ಅವಧಿಯಲ್ಲಿ 41ರಷ್ಟು ಇದ್ದ ‘ವಾಣಿಜ್ಯ ವಿಶ್ವಾಸ ಸೂಚ್ಯಂಕ’ವು ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ 50.3ಕ್ಕೆ ಏರಿಕೆ ಕಂಡಿದೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಸಮೀಕ್ಷೆ ಹೇಳಿದೆ.

‘ಸೂಚ್ಯಂಕದಲ್ಲಿ ಕಂಡುಬಂದಿರುವ ಆಶಾದಾಯಕ ಚೇತರಿಕೆಗೆ ಬೆಂಬಲವಾಗಿ ‘ನಿರೀಕ್ಷೆಗಳ ಸೂಚ್ಯಂಕ’ದಲ್ಲಿ ಕೂಡ ಏರಿಕೆ ಆಗಿದೆ. ಇದು 55.2 ಅಂಶಗಳಿಗೆ ಏರಿದೆ’ ಎಂದು ಸಿಐಐ ಹೇಳಿದೆ. ‘ವಾಣಿಜ್ಯೋದ್ಯಮಗಳಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂಬುದು ನಿಜ. ಆದರೆ, ಸರ್ಕಾರವು ಉದ್ಯಮಗಳನ್ನು ಕೈಹಿಡಿದು ನಡೆಸಿದರೆ, ಬೆಂಬಲವಾಗಿ ನಿಲ್ಲುವುದನ್ನು ಮುಂದುವರಿಸಿದರೆ ಚೇತರಿಕೆಗೆ ಇನ್ನಷ್ಟು ವೇಗ ಸಿಗಬಹುದು’ ಎಂದು ಸಿಐಐ ಮಹಾನಿರ್ದೇಶಕ ಚಂದ್ರಜಿತ್ ಬ್ಯಾನರ್ಜಿ ಹೇಳಿದ್ದಾರೆ.

ADVERTISEMENT

ವಾಣಿಜ್ಯ ವಿಶ್ವಾಸ ಸೂಚ್ಯಂಕಕ್ಕೆ ಸಂಬಂಧಿಸಿದ ಸಮೀಕ್ಷೆಯನ್ನು ಆಗಸ್ಟ್–ಸೆಪ್ಟೆಂಬರ್ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. ವಿವಿಧ ವಲಯಗಳ 150ಕ್ಕೂ ಹೆಚ್ಚಿನ ಕಂಪನಿಗಳು ಇದರಲ್ಲಿ ಪಾಲ್ಗೊಂಡಿದ್ದವು. ಆಂತರಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗದಿರುವುದು ಮುಂದಿನ ಆರು ತಿಂಗಳ ಅವಧಿಯಲ್ಲಿ ವಾಣಿಜ್ಯೋದ್ಯಮಗಳ ವಿಶ್ವಾಸ ಹೆಚ್ಚಿಸುವಲ್ಲಿ ಅತಿದೊಡ್ಡ ಸವಾಲಾಗಿ ಪರಿಣಮಿಸಬಹುದು ಎಂದು ಶೇಕಡ 50ಕ್ಕೂ ಹೆಚ್ಚಿನ ಕಂಪನಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ವಾಣಿಜ್ಯ ಚಟುವಟಿಕೆಗಳು ಕೋವಿಡ್–19 ಪೂರ್ವದ ಸ್ಥಿತಿಗೆ ಮರಳಬಹುದು ಎಂದು ಶೇ 30ರಷ್ಟು ಕಂಪನಿಗಳು ಅಭಿಪ್ರಾಯಪಟ್ಟಿವೆ.

‘2020–21ರಲ್ಲಿ ದೇಶದ ಅರ್ಥ ವ್ಯವಸ್ಥೆಯು ಶೇ (–)4ಕ್ಕಿಂತ ಹೆಚ್ಚು ಕುಸಿತ ಕಾಣಲಿದೆ ಎಂದು ಶೇ 35ರಷ್ಟು ಕಂಪನಿಗಳು ಹೇಳಿವೆ. ರಾಜ್ಯಗಳು ಜಾರಿಗೆ ತರುತ್ತಿರುವ ಲಾಕ್‌ಡೌನ್‌ ಕ್ರಮಗಳು ಅರ್ಥವ್ಯವಸ್ಥೆಯ ಬೆಳವಣಿಗೆಗೆ ಮತ್ತಷ್ಟು ಅಡ್ಡಿಯಾಗಿವೆ’ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.