ನವದೆಹಲಿ: ಉದ್ಯಮಿ ಪಾಲೋನಜಿ ಮಿಸ್ತ್ರಿ (93) ಅವರು ಸೋಮವಾರ ರಾತ್ರಿ ಮುಂಬೈನಲ್ಲಿ ನಿಧನರಾದರು. 150 ವರ್ಷಗಳ ಇತಿಹಾಸವಿರುವ ಶಾಪೂರ್ಜಿ ಪಾಲೋನಜಿ ಸಮೂಹದ ಮುಖ್ಯಸ್ಥರಾಗಿದ್ದ ಅವರು ಕಂಪನಿಗಳ ಬೆಳವಣಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕೈಗಾರಿಕೋದ್ಯಮಿಯಾಗಿ ಅವರ ಕೊಡುಗೆಗಳನ್ನು ಪರಿಗಣಿಸಿ ಭಾರತ ಸರ್ಕಾರವು 2016ರಲ್ಲಿ ಪಾಲೋನಜಿ ಮಿಸ್ತ್ರಿ ಅವರಿಗೆ 'ಪದ್ಮ ಭೂಷಣ' ನೀಡಿ ಗೌರವಿಸಿದೆ. ದೇಶದ ಹಿರಿಯ ಸಿರಿವಂತ ವ್ಯಕ್ತಿಯಾಗಿಯೂ ಪಾಲೋನಜಿ ಹೆಸರಾಗಿದ್ದರು.
ಫೋರ್ಬ್ಸ್ ಇತ್ತೀಚಿನ ಮಾಹಿತಿಯ ಪ್ರಕಾರ, ಪಾಲೋನಜಿ ಅವರ ಒಟ್ಟು ಸಂಪತ್ತು ₹1 ಲಕ್ಷ ಕೋಟಿಗೂ ಅಧಿಕ. ಅವರು ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 125ನೇ ಸ್ಥಾನದಲ್ಲಿದ್ದಾರೆ. ಟಾಟಾ ಸನ್ಸ್‌ನಲ್ಲಿ ಶೇಕಡ 18.4ರಷ್ಟು ಪಾಲುದಾರಿಕೆ ಹೊಂದಿದ್ದಾರೆ.
1865ರಲ್ಲಿ ಸ್ಥಾಪನೆಯಾದ ಶಾಪೂರ್ಜಿ ಪಾಲೋನಜಿ ಸಮೂಹವು ಎಂಜಿನಿಯರಿಂಗ್ ಮತ್ತು ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್, ಜಲ, ಇಂಧನ ಹಾಗೂ ಹಣಕಾಸು ಸೇವೆಗಳನ್ನು ನೀಡುತ್ತಿದೆ. 50 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಪಾಲೋನಜಿ ಅವರದು ಗುಜರಾತ್‌ನ ಪಾರ್ಸಿ ಕುಟುಂಬ. ಪ್ರಸ್ತುತ ಶಾಪೂರ್ಜಿ ಪಾಲೋನಜಿ ಸಮೂಹದ ಕಂಪನಿಗಳಿಗೆ ಪಾಲೋನಜಿ ಅವರ ಹಿರಿಯ ಮಗ ಶಾಪೂರ್ಜಿ ಮಿಸ್ತ್ರಿ ಅಧ್ಯಕ್ಷರಾಗಿದ್ದಾರೆ. ಅವರ ಕಿರಿಯ ಮಗ ಸೈರಸ್ ಮಿಸ್ತ್ರಿ ಅವರು 2012ರಿಂದ 2016ರವರೆಗೂ ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದರು. 4 ವರ್ಷಗಳ ಬಳಿಕ ಆ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.