ADVERTISEMENT

ಬ್ಯಾಡಗಿ | ಮೆಣಸಿನಕಾಯಿ ಮಾರಾಟ ದಾಖಲೆ: ₹3,187 ಕೋಟಿ ವಹಿವಾಟು

ಎಪಿಎಂಸಿಯಿಂದ ₹19.18 ಕೋಟಿ ಶುಲ್ಕ ಸಂಗ್ರಹ

ಪ್ರಮೀಳಾ ಹುನಗುಂದ
Published 27 ಏಪ್ರಿಲ್ 2024, 21:40 IST
Last Updated 27 ಏಪ್ರಿಲ್ 2024, 21:40 IST
ಬ್ಯಾಡಗಿ ಎಪಿಎಂಸಿಗೆ ಮಾರಾಟಕ್ಕೆ ತಂದಿರುವ ಮೆಣಸಿನಕಾಯಿ ಚೀಲಗಳು
ಬ್ಯಾಡಗಿ ಎಪಿಎಂಸಿಗೆ ಮಾರಾಟಕ್ಕೆ ತಂದಿರುವ ಮೆಣಸಿನಕಾಯಿ ಚೀಲಗಳು   

ಬ್ಯಾಡಗಿ (ಹಾವೇರಿ ಜಿಲ್ಲೆ): ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವಹಿವಾಟು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, 2023–24ನೇ ಆರ್ಥಿಕ ವರ್ಷದಲ್ಲಿ ಬ್ಯಾಡಗಿ ಎಪಿಎಂಸಿಯಲ್ಲಿ ₹3,187 ಕೋಟಿ ವಹಿವಾಟು ನಡೆದಿದೆ.

ಎಪಿಎಂಸಿಯು ₹0.60ರಂತೆ ಒಟ್ಟು ₹19.18 ಕೋಟಿ ಮಾರುಕಟ್ಟೆ ಶುಲ್ಕ (ಸೆಸ್‌) ಸಂಗ್ರಹಿಸಿದೆ. ಅಲ್ಲದೆ, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ಗರಿಷ್ಠ ₹70,109 ಹಾಗೂ ಕಡ್ಡಿ ಮೆಣಸಿನಕಾಯಿ ₹ 70,080ರಂತೆ ಮಾರಾಟವಾಗಿ ದಾಖಲೆ ಬರೆದಿತ್ತು.

2021–22ರಲ್ಲಿ 15.85 ಲಕ್ಷ ಕ್ವಿಂಟಲ್‌ ಮೆಣಸಿನಕಾಯಿ ಮಾರಾಟವಾಗಿದ್ದರೆ 2022–23ರಲ್ಲಿ 9.90 ಲಕ್ಷ ಕ್ವಿಂಟಲ್‌ ಮಾರಾಟವಾಗಿದೆ. ಬರಗಾಲ ನಡುವೆಯೂ ಬೆಳೆಗಾರರು ಬಂಪರ್‌ ಬೆಳೆ ಬೆಳೆದಿದ್ದು, 2023-24ರಲ್ಲಿ 68.3 ಲಕ್ಷ ಚೀಲ (17.09 ಲಕ್ಷ ಕ್ವಿಂಟಲ್‌) ಮೆಣಸಿನಕಾಯಿಯನ್ನು ಮಾರಾಟ ಮಾಡಿದ್ದಾರೆ.

ADVERTISEMENT

ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣದಿಂದ ಮೆಣಸಿನಕಾಯಿ ಆವಕವಾಗಿತ್ತು. ನೀರಾವರಿ ಆಶ್ರಿತ ಬಳ್ಳಾರಿ, ರಾಯಚೂರು, ಸುರಪುರ, ಶಹಾಪುರ, ಬಾಗಲಕೋಟಿ ಹಾಗೂ ಮತ್ತಿತರ ಭಾಗಗಳಲ್ಲಿ ಬೆಳೆದ ಮೆಣಸಿಕಾಯಿಯನ್ನು ಮಾರಾಟ ಮಾಡಲಾಗಿದೆ. ಇದರಿಂದ ವಹಿವಾಟು ಹೆಚ್ಚಿದೆ.

ಒಂದೇ ದಿನದಲ್ಲಿ ಮೂರು ಬಾರಿ ಮೂರು ಲಕ್ಷಕ್ಚೂ ಹೆಚ್ಚು ಚೀಲ ಮೆಣಸಿನಕಾಯಿ ಆವಕವಾಗಿದ್ದರೆ, ಐದು ಬಾರಿ ಎರಡು ಲಕ್ಷಕಿಂತ ಹೆಚ್ಚು ಚೀಲ ಆವಕವಾಗಿದ್ದವು. ಸುಮಾರು 7 ಬಾರಿ ಒಂದು ಲಕ್ಷ ಚೀಲಗಳಷ್ಟು ಮೆಣಸಿನಕಾಯಿ ಆವಕವಾಗಿದ್ದು, ಕೂಡ ದಾಖಲೆಯಾಗಿದೆ.

ಹೊಸ ದಾಖಲೆ: ಮಾರ್ಚ್‌ 4ರಂದು ಒಂದೇ ದಿನದಲ್ಲಿ 4,09,121 ಚೀಲ (1,02,280 ಕ್ವಿಂಟಲ್‌) ಮೆಣಸಿನಕಾಯಿಯನ್ನು ಮಾರಾಟಕ್ಕೆ ತರಲಾಗಿತ್ತು. ಇದು ಮಾರುಕಟ್ಟೆ ಇತಿಹಾಸದಲ್ಲಿಯೇ ಹೊಸ ದಾಖಲೆ ಸೃಷ್ಟಿಸಿತ್ತು.

ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲಿ ರೈತರು ಬೆಳೆದ ಮೆಣಸಿನಕಾಯಿಯು ಕಳೆದ ಮೂರು ದಿನಗಳಿಂದ ಹೆಚ್ಚು ಆವಕವಾಗುತ್ತಿದೆ. ಇದರಿಂದ ಎಪಿಎಂಸಿ ಪ್ರಾಂಗಣದಲ್ಲಿ ಕಾಲಿಡಲು ಜಾಗವಿಲ್ಲದಂತಾಗಿದೆ. ಟೆಂಡರ್‌ಗಿಡಲು ಸ್ಥಳಾವಕಾಶವಿಲ್ಲದೆ ಮೆಣಸಿನಕಾಯಿ ಚೀಲಗಳನ್ನು ಹೊತ್ತ ನೂರಾರು ವಾಹನಗಳು ಪ್ರಾಂಗಣದ ಹೊರಗೆ ನಿಲ್ಲುವಂತಾಗಿದೆ.

ಬ್ಯಾಡಗಿ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಕ್ಕೆ ಇಡಲಾಗಿರುವ ಮೆಣಸಿನಕಾಯಿಗೆ ವರ್ತಕರು ಟೆಂಡರ್‌ ನಮೂದಿಸುತ್ತಿರುವುದು 
ಎಪಿಎಂಸಿಯಲ್ಲಿ ಇ–ಟೆಂಡರ್‌ ಅಳವಡಿಸಲಾಗಿದೆ. ಇದರಿಂದ ಸಂಜೆ 4ಕ್ಕೆ ಟೆಂಡರ್‌ ಡಿಕ್ಲೇರ್‌ ಮಾಡಲಾಗುತ್ತದೆ. ತೂಕದ ಪ್ರಕ್ರಿಯೆ ಬಳಿಕ ನಂತರ ರೈತರಿಗೆ ಪಟ್ಟಿ ನೀಡಿ ಹಣ ನೀಡಲಾಗುತ್ತದೆ.
–ಎಚ್‌.ವೈ. ಸತೀಶ, ಕಾರ್ಯದರ್ಶಿ ಎಪಿಎಂಸಿ ಬ್ಯಾಡಗಿ
ಒಂದೇ ದಿನದಲ್ಲಿ ನೂರಾರು ಕ್ವಿಂಟಲ್‌ ಮೆಣಸಿನಕಾಯಿ ಮಾರಾಟಕ್ಕೆ ತರುವುದರಿಂದ ಜಾಗದ ಕೊರತೆಯಾಗುತ್ತಿದೆ. ಇದನ್ನು ನೀಗಿಸಲು ಸರ್ಕಾರ ಮಾರುಕಟ್ಟೆಗೆ ಹೊಂದಿಕೊಂಡಿರುವ ಜಾಗ ನೀಡುವುದು ಅವಶ್ಯ.
–ಸುರೇಶಗೌಡ್ರ ಪಾಟೀಲ, ಅಧ್ಯಕ್ಷ ವರ್ತಕರ ಸಂಘ ಬ್ಯಾಡಗಿ
ವಿವಿಧ ತಳಿಯ ಮೆಣಸಿನಕಾಯಿ ಅಭಿವೃದ್ಧಿಪಡಿಸಿದ ಪರಿಣಾಮ ಬ್ಯಾಡಗಿ ಮೂಲ ತಳಿ ನೇಪಥ್ಯಕ್ಕೆ ಸರಿದಿದೆ. ಕುಂದಗೋಳ ಗದಗ ಅಂತೂರ ಬೆಂತೂರನಲ್ಲಿ ಬೆಳೆಯುವ ಬ್ಯಾಡಗಿ ಮೂಲ ತಳಿಯನ್ನು ಅಭಿವೃದ್ಧಿಪಡಿಸಬೇಕು.
–ಎಸ್‌.ಬಿ. ಖಾನಗೌಡ್ರ, ದಲ್ಲಾಳಿ
ಸಂಕಷ್ಟ ಕಾಲದಲ್ಲಿ ನಮಗೆ ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆ ಆಸರೆಯಾಗಿದೆ. ಜೀವನಕ್ಕೆ ಒಂದು ದಾರಿ ತೋರಿದೆ. ಮೆಣಸಿನಕಾಯಿ ತುಂಬು (ತೊಟ್ಟು) ತೆಗೆಯುವ ಹಾಗೂ ಸ್ವಚ್ಛಗೊಳಿಸುವ ಕೆಲಸವನ್ನು ನಿರ್ವಹಿಸಿದರೆ ಕೂಲಿ ಸಿಗುತ್ತಿದೆ. 
–ಸುಜಾತಾ ಕಮಲಾಪುರ, ಕೂಲಿ ಕಾರ್ಮಿಕರು.
ನೂರಾರು ಕಿ.ಮೀ ದೋರದಿಂದ ಮೆಣಸಿನಕಾಯಿ ಮಾರಾಟಕ್ಕೆ ತರುತ್ತಿದ್ದು ಇಲ್ಲಿಯ ವರ್ತಕರ ಪಾರದರ್ಶಕ ತೂಕ ಶೀಘ್ರ ಹಣದ ವಿಲೇವಾರಿಯಿಂದ ರೈತರ ವಿಶ್ವಾಸ ಗಳಿಸಿದೆ
–ರೈತ ವಿಜಯಪ್ರಕಾಶ ಸಜ್ಜನರ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.