ನವದೆಹಲಿ: ಬೈಜುಸ್ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್ ಆ್ಯಂಡ್ ಲರ್ನ್‌ನಿಂದ ಶುಕ್ರವಾರ ಕರೆದಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಆಡಳಿತ ಮಂಡಳಿಯು ಮಂಡಿಸಿದ ನಿರ್ಣಯಕ್ಕೆ ಷೇರುದಾರರಿಂದ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಕಂಪನಿಯ ಒಟ್ಟು ₹1,664 (200 ಮಿಲಿಯನ್ ಡಾಲರ್) ಕೋಟಿ ಮೊತ್ತದ ಅಧಿಕೃತ ಷೇರು ಬಂಡವಾಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಒಪ್ಪಿಗೆ ಪಡೆಯಲು ಈ ಸಭೆ ಕರೆಯಲಾಗಿತ್ತು.
ಸಿಇಒ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಆಡಳಿತ ಮಂಡಳಿಯಿಂದ ಹೊರಹಾಕುವಂತೆ ಆಗ್ರಹಿಸಿದ್ದ ಪ್ರಮುಖ ಹೂಡಿಕೆದಾರರು ಸಭೆಯಿಂದ ಅಂತರ ಕಾಯ್ದುಕೊಂಡಿದ್ದರು.
‘ಬೆಳಿಗ್ಗೆ 10ಗಂಟೆಗೆ ಸಭೆ ಆರಂಭವಾಯಿತು. ಸುಮಾರು 20 ಹೂಡಿಕೆದಾರರ ಪರವಾಗಿ ಅವರ ಪ್ರತಿನಿಧಿಗಳು ಭಾಗವಹಿಸಿದ್ದರು. ನಿರ್ಣಯಕ್ಕೆ ಸಂಬಂಧಿಸಿದಂತೆ ಕೆಲವರು ಅಂಚೆ ಮೂಲಕ ಮತ ಚಲಾವಣೆಗೆ ಕೋರಿದರು. ಇದಕ್ಕೆ ಆಡಳಿತ ಮಂಡಳಿಯಿಂದ ಉತ್ತರ ನೀಡಲಾಯಿತು. ಬಳಿಕ ಮಂಡನೆಯಾದ ನಿರ್ಣಯಕ್ಕೆ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ’ ಎಂದು ಮೂಲಗಳು ತಿಳಿಸಿವೆ.
ಬೈಜುಸ್ ಕರೆದಿದ್ದ ಸಭೆ ಪ್ರಶ್ನಿಸಿ ಪ್ರಮುಖ ಆರು ಹೂಡಿಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಬೆಂಗಳೂರು ಘಟಕದ ಮೆಟ್ಟಿಲೇರಿದ್ದಾರೆ. ಕಂಪನಿಯಲ್ಲಿ ಈ ಹೂಡಿಕೆದಾರರು ಶೇ 32ರಷ್ಟು ಷೇರುಗಳ ಮೇಲೆ ಒಡೆತನ ಹೊಂದಿದ್ದಾರೆ.
‘ನಮ್ಮ ಪರವಾಗಿ ಅಧಿಕೃತ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು’ ಎಂದು ಹೂಡಿಕೆದಾರರ ಮೂಲಗಳು ತಿಳಿಸಿವೆ.
ನಿರ್ಣಯಕ್ಕೆ ಸಂಬಂಧಿಸಿದಂತೆ ಅಂಚೆ ಮೂಲಕ ಮತ ಚಲಾಯಿಸಲು ಏಪ್ರಿಲ್ 6ರ ವರೆಗೆ ಅವಕಾಶವಿದೆ. ಆ ನಂತರ ಸಭೆಯ ಫಲಿತಾಂಶವು ಪ್ರಕಟವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.