ನವದೆಹಲಿ: ಬೈಜುಸ್ ಕಂಪನಿಯ ಮಾತೃಸಂಸ್ಥೆಯಾದ ಥಿಂಕ್ ಆ್ಯಂಡ್ ಲರ್ನ್ ಆಡಳಿತ ಮಂಡಳಿಯಿಂದ ಸಿಇಒ ಬೈಜು ರವೀಂದ್ರನ್ ಹಾಗೂ ಅವರ ಕುಟುಂಬದ ಸದಸ್ಯರನ್ನು ಪದಚ್ಯುತಿಗೊಳಿಸುವಂತೆ ಶುಕ್ರವಾರ ವರ್ಚುವಲ್ ಆಗಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ (ಇಜಿಎಂ) ಶೇ 60ಕ್ಕೂ ಹೆಚ್ಚು ಷೇರುದಾರರು ಮತ ಚಲಾಯಿಸಿದ್ದಾರೆ.
‘ಸಭೆಯಲ್ಲಿ ಮಂಡಿಸಿದ ಏಳು ನಿರ್ಣಯಗಳಿಗೆ ಷೇರುದಾರರು ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದಾರೆ’ ಎಂದು ಸಭೆ ಕರೆದಿದ್ದ ಹೂಡಿಕೆದಾರರೊಬ್ಬರು ಹೇಳಿದ್ದಾರೆ.
ಕಂಪನಿಯ ನಿರ್ವಹಣೆಯಲ್ಲಿ ರವೀಂದ್ರನ್ ಮತ್ತು ಅವರ ಕುಟುಂಬವು ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಹಣಕಾಸಿನ ಅವ್ಯವಹಾರದಲ್ಲಿ ಭಾಗಿಯಾಗಿದೆ. ಹಾಗಾಗಿ, ಹೊಸದಾಗಿ ಆಡಳಿತ ಮಂಡಳಿಯನ್ನು ಪುನರ್ ರಚಿಸಬೇಕು. ಕೂಡಲೇ, ಕಂಪನಿಯ ನಾಯಕತ್ವವನ್ನು ಬದಲಾಯಿಸಬೇಕು. ಕಂಪನಿಯು ಸ್ವಾಧೀನ ಪಡಿಸಿಕೊಂಡಿರುವ ಸ್ವತ್ತುಗಳ ಬಗ್ಗೆ ಮೂರನೇ ವ್ಯಕ್ತಿಯಿಂದ ನ್ಯಾಯಯುತ ತನಿಖೆ ನಡೆಸಬೇಕು ಎಂದು ನಿರ್ಣಯಗಳನ್ನು ಮಂಡಿಸಲಾಗಿತ್ತು.
ಹೂಡಿಕೆದಾರರು ಕರೆದಿರುವ ಸಭೆಯನ್ನು ಪ್ರಶ್ನಿಸಿ ರವೀಂದ್ರನ್ ಅವರು ಕರ್ನಾಟಕದ ಹೈಕೋರ್ಟ್‌ನ ಮೊರೆ ಹೋಗಿದ್ದು, ನ್ಯಾಯಾಲಯವು ಮಾರ್ಚ್ 13ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಹಾಗಾಗಿ, ಸಭೆಯಲ್ಲಿ ಕೈಗೊಂಡಿರುವ ಈ ನಿರ್ಣಯಗಳು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿವೆ.
ಸಭೆಯಿಂದ ದೂರ ಉಳಿದ ಕುಟುಂಬ: ‘ಕಂಪನಿಯ ನಿಯಮಾವಳಿಗಳ ಅನ್ವಯ ಸಭೆ ಕರೆದಿಲ್ಲ’ ಎಂದು ದೂರಿದ್ದ ರವೀಂದ್ರನ್ ಹಾಗೂ ಕುಟುಂಬವು ಸಭೆಯಿಂದ ದೂರ ಉಳಿದಿತ್ತು.
‘ಕಂಪನಿಯ ನಿಯಮಾವಳಿ ಅನ್ವಯ ಸಭೆಯಲ್ಲಿ ಕನಿಷ್ಠ ಒಬ್ಬರು ಸಂಸ್ಥಾಪಕರು ಭಾಗವಹಿಸಬೇಕಿದೆ. ನಿರ್ದಿಷ್ಟ ಕೋರಂ ಕೂಡ ಇರಬೇಕು. ಕೇವಲ ಶೇ 20ರಷ್ಟು ಷೇರುದಾರರಷ್ಟೇ ಭಾಗವಹಿಸಿದ್ದಾರೆ’ ಎಂದು ಹೇಳಿದೆ.
‘ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳಿಗೆ ಮಾನ್ಯತೆ ಇಲ್ಲ. ಅಲ್ಲದೇ, ಅನುಷ್ಠಾನಗೊಳಿಸಲು ಸಾಧ್ಯವಾಗದಂತಹ ಕಾನೂನು ಬಾಹಿರ ನಿರ್ಣಯಗಳನ್ನು ಕೈಗೊಳ್ಳಲಾಗಿದೆ’ ಎಂದು ಪ್ರತಿಕ್ರಿಯಿಸಿದೆ.
ಲುಕ್‌ಔಟ್ ನೋಟಿಸ್ ಜಾರಿ: ರವೀಂದ್ರನ್ ವಿರುದ್ಧ ಮತ್ತೆ ಹೊಸದಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯವು (ಇ.ಡಿ), ಬ್ಯೂರೊ ಆಫ್ ಇಮಿಗ್ರೇಷನ್ (ಬಿಒಐ) ಅಧಿಕಾರಿಗಳಿಗೆ ಸೂಚಿಸಿದೆ.
ರವೀಂದ್ರನ್ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಇ.ಡಿ ಕಚೇರಿಯು ತನಿಖೆ ನಡೆಸುತ್ತಿದೆ. ಹೂಡಿಕೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶನಾಲಯವು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.
ಆದರೆ, ರವೀಂದ್ರನ್ ಅವರು ಸದ್ಯ ದುಬೈನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.