ನವದೆಹಲಿ: ಕೇಂದ್ರ ಸಚಿವ ಸಂಪುಟವು ಡಿಜಿಟಲ್ ಇಂಡಿಯಾ ಯೋಜನೆಯನ್ನು ವಿಸ್ತರಿಸುವುದಕ್ಕೆ ಬುಧವಾರ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯು, ಈ ಉದ್ದೇಶಕ್ಕೆ ₹14,903 ಕೋಟಿ ನಿಗದಿ ಮಾಡಲು ಒಪ್ಪಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, 2021–22ರಿಂದ 2025–26ನೆಯ ಸಾಲಿನವರೆಗೆ ಈ ಮೊತ್ತವನ್ನು ನಿಗದಿ ಮಾಡಲಾಗಿದೆ ಎಂದಿದ್ದಾರೆ. ವಿಸ್ತರಣೆ ಕಂಡಿರುವ ಯೋಜನೆಯ ಭಾಗವಾಗಿ, ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಷನ್ (ಎನ್‌ಸಿಎಂ) ಅಡಿಯಲ್ಲಿ ಇನ್ನೂ ಎಂಟು ಸೂಪರ್ ಕಂಪ್ಯೂಟರ್‌ಗಳನ್ನು ಸೇರಿಸಲಾಗುತ್ತದೆ.
ಎನ್‌ಸಿಎಂ ಅಡಿಯಲ್ಲಿ ಇದುವರೆಗೆ 18 ಸೂಪರ್ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 2015ರಲ್ಲಿ ಕೇಂದ್ರವು ಒಟ್ಟು 70 ಸೂಪರ್ ಕಂಪ್ಯೂಟರ್‌ಗಳನ್ನು ಎನ್‌ಸಿಎಂ ಅಡಿಯಲ್ಲಿ ಅಳವಡಿಸಲು ಒಪ್ಪಿಗೆ ನೀಡಿತ್ತು.
ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ದಿಮೆಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ, ಅವುಗಳಿಗೆ ಡಿಜಿಲಾಕರ್ ಸೌಲಭ್ಯವನ್ನು ವಿಸ್ತರಿಸಲಾಗುತ್ತದೆ ಎಂದು ವೈಷ್ಣವ್ ಹೇಳಿದ್ದಾರೆ. ಈ ಸೌಲಭ್ಯವನ್ನು ಎಂಎಸ್‌ಎಂಇ ವಲಯದ ಉದ್ದಿಮೆಗಳು ಸಾಲ ಪಡೆಯಲು ಬಳಸಬಹುದು. ಅಲ್ಲದೆ, ತಮಗೆ ಸಂಬಂಧಿಸಿದ ದಾಖಲೆಗಳನ್ನು ಆ್ಯಪ್ ಮೂಲಕವೇ ದೃಢೀಕರಿಸಿ, ಇತರ ಸೇವೆಗಳನ್ನು ಕೂಡ ಪಡೆಯಬಹುದು.
ಡಿಜಿಟಲ್ ಇಂಡಿಯಾ ಯೋಜನೆಯ ವಿಸ್ತರಣೆಯ ಅಡಿಯಲ್ಲಿ ಒಟ್ಟು 6.25 ಲಕ್ಷ ಐ.ಟಿ. ಉದ್ಯೋಗಿಗಳಿಗೆ ಕೌಶಲ ತರಬೇತಿ ನೀಡಲಾಗುತ್ತದೆ. ಮಾಹಿತಿ ಭದ್ರತೆ ವಿಭಾಗದಲ್ಲಿ ಒಟ್ಟು 2.65 ಲಕ್ಷ ಜನರಿಗೆ ತರಬೇತಿ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.