ನವದೆಹಲಿ: ರೈಲ್ವೆ ನೌಕರರಿಗೆ ಕಾರ್ಯಕ್ಷಮತೆ ಆಧರಿಸಿದ ಬೋನಸ್ (ಪಿಎಲ್‌ಬಿ) ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ 11.27 ಲಕ್ಷ ರೈಲ್ವೆ ನೌಕರರಿಗೆ ಪ್ರಯೋಜನವಾಗಲಿದೆ.
‘ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2021–22ನೇ ಹಣಕಾಸು ವರ್ಷದಲ್ಲಿ 78 ದಿನಗಳ ವೇತನಕ್ಕೆ ಸಮನಾದ ಬೋನಸ್ ನೀಡಲು ನಿರ್ಧರಿಸಲಾಯಿತು. ನಾನ್ ಗೆಜೆಟೆಡ್ ರೈಲ್ವೆ ಉದ್ಯೋಗಿಗಳು ಇದಕ್ಕೆ ಅರ್ಹರಾಗಿದ್ದಾರೆ. ಇದಕ್ಕೆ ಸುಮಾರು ₹1,832.09 ಕೋಟಿ ವೆಚ್ಚವಾಗಲಿದೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
‘ಪ್ರತಿ ವರ್ಷವೂ ದಸರಾ ರಜೆಗೂ ಮುನ್ನ ಪಿಎಲ್‌ಬಿ ನೀಡಲಾಗುತ್ತದೆ. ಈ ಬಾರಿ ಅರ್ಹ ಉದ್ಯೋಗಿಗೆ ಗರಿಷ್ಠ ₹17,951 ಮೊತ್ತ ಸಿಗಲಿದೆ. ಟ್ರ್ಯಾಕ್ ನಿರ್ವಾಹಕರು, ಚಾಲಕರು ಮತ್ತು ಗಾರ್ಡ್‌ಗಳು, ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞರ ಸಹಾಯಕರು, ನಿಯಂತ್ರಕರು, ಪಾಯಿಂಟ್ಸ್‌ಮನ್, ಸಚಿವಾಲಯದ ಸಿಬ್ಬಂದಿ ಹಾಗೂ ‘ಸಿ’ ದರ್ಜೆಯ ಇತರ ರೈಲ್ವೆ ಉದ್ಯೋಗಿಗಳಿಗೆ ಇದು ಅನ್ವಯವಾಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ರೈಲ್ವೆ ಉದ್ಯೋಗಿಗಳು ಇನ್ನಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸುವುದನ್ನು ಉತ್ತೇಜಿಸುವುದು ಪಿಎಲ್‌ಬಿಯ ಉದ್ದೇಶ’ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.