ಆರ್ಥಿಕ ಮಂದಗತಿಯಿಂದ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ, ನಿರುದ್ಯೋಗ ಹೆಚ್ಚಳದಿಂದ ತೀವ್ರವಾದ ಮಂದಗತಿ ಹೀಗೆ ವಿಷವರ್ತುಲದಲ್ಲಿ ಸಿಲುಕ್ಕಿದ್ದ ದೇಶದ ಆರ್ಥಿಕತೆಯಲ್ಲಿ ಈಗ ಹಣದುಬ್ಬರದ ಅಬ್ಬರವೂ ಪ್ರಾರಂಭವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗ ಒಟ್ಟೊಟ್ಟಿಗೆ ಇರುವ ಸಂಕೀರ್ಣ ಸನ್ನಿವೇಶವನ್ನು ಅರ್ಥಶಾಸ್ತ್ರದಲ್ಲಿ ಸ್ಥಗಿತ ಹಣದುಬ್ಬರ (stagflation) ಎಂದು ಕರೆಯಲಾಗುತ್ತದೆ. ಈಗ ನಮ್ಮ ಆರ್ಥಿಕತೆ ಇಂತಹ ತೊಡಕಿನ ಸ್ಥಿತಿಯತ್ತ ಸಾಗುತ್ತಿದೆಯೆಂಬ ಭಾವನೆ ಜೋರಾಗುತ್ತಿರುವಾಗ ಪರಿಹಾರ ಕ್ರಮದ ರೂಪದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಗ್ರ ಸ್ವರೂಪದ ರಾಷ್ಟ್ರೀಯ ಉದ್ಯೋಗ ನೀತಿಯನ್ನು 2020-21ನೇ ಸಾಲಿನ ಬಜೆಟ್‌ನಲ್ಲಿ ಮಂಡಿಸಬೇಕಾಗಿದೆ.
ಸವಾಲುಗಳು ಆಂತರಿಕ ಕಾರಣಗಳಿಂದ ಉದ್ಭವಿಸುತ್ತಿರುವಂತೆ ಬಾಹ್ಯ ಮೂಲಗಳಲ್ಲೂ ಗೋಚರಿಸುತ್ತಿದೆ. ಜಿನಿವಾ ನಗರದಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿದ ‘ಉದ್ಯೋಗಗಳ ಭವಿತವ್ಯ-2018’ ಎನ್ನುವ ಶೀರ್ಷಿಕೆಯುಳ್ಳ ಮುನ್ನೋಟ ಮತ್ತು ಅದೇ ವೇದಿಕೆ ನವೆಂಬರ್ 25ರಂದು ಬಿಡುಗಡೆ ಮಾಡಿದ ಇನ್ನೊಂದು ಮುನ್ನೋಟವಾದ, ‘ಕಾಯಕ ಮತ್ತು ಭವಿಷ್ಯದ ಕೌಶಲ್ಯಗಳ ಸ್ವರೂಪ’ವು 2030ರ ಹೊತ್ತಿಗೆ ಯಾಂತ್ರೀಕರಣ ಹಾಗೂ ಕೃತಕ ಬುದ್ಧಿಮತ್ತೆಯಿಂದ ವಿಶ್ವದಾದ್ಯಂತ ಆಗಲಿರುವ ಭಾರಿ ಬದಲಾವಣೆಗಳ ಚಿತ್ರಣ ನೀಡುತ್ತದೆ.
2025 ಸಮೀಪಿಸುತ್ತಿದ್ದಂತೆ ಶೇ 48ರಷ್ಟು ಕಾಯಕಗಳನ್ನು ಕಾರ್ಮಿಕರು ಮಾಡುತ್ತಿದ್ದರೆ, ಉಳಿದ ಶೇ 52ರಷ್ಟು ಕಾರ್ಯಗಳನ್ನು ಯಂತ್ರಗಳು ಮತ್ತು ಕೃತಕ ಬುದ್ಧಿಮತ್ತೆ ಅವಲಂಬಿಸಿದ ವಿಧಾನಗಳು (ಅಲ್ಗಾರಿದಮ್) ನಿರ್ವಹಿಸಲಿವೆ. ಈಗಿರುವ ಅಸಂಖ್ಯಾತ ಕಾರ್ಮಿಕರು ಕಾಲ ಕಾಲಕ್ಕೆ ಬೇಕಾಗುವ ಹೊಸ ಕೌಶಲಗಳನ್ನು ಪಡೆಯದಿದ್ದರೆ ಅವರು ಸಾಮಾಜಿಕ ವ್ಯವಸ್ಥೆಯಲ್ಲಿ ಅಪ್ರಸ್ತುತರಾಗಿ ಬಿಡುವ ಸಾಧ್ಯತೆಯನ್ನು ಈ ಮುನ್ನೋಟಗಳು ನೀಡುತ್ತವೆ.
ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳೂ ಪರಿಸ್ಥಿತಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿ ಆಧಾರಿತ ರಾಷ್ಟ್ರೀಯ ಉದ್ಯೋಗ ನೀತಿ ರೂಪಿಸುವ ಅವಶ್ಯಕತೆ ತಿಳಿಯಲು ಈ ಮುನ್ನೋಟಗಳು ನೆರವಾಗುವಾಗುತ್ತವೆ. ಮೋದಿ ಸರ್ಕಾರ ಮೂರು ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರೂ ಅದಕ್ಕೆ ಮಾಡಿದ ಸರ್ಕಾರಿ ವೆಚ್ಚಕ್ಕೆ ತಕ್ಕ ಪ್ರತಿಫಲ ಬಂದಿಲ್ಲ. ಈ ತನಕ ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದ ಆರ್ಥಿಕ ಸಮೀಕ್ಷೆಗಳಲ್ಲಿ ಎಲ್ಲೂ ಕೌಶಲ್ಯಾಭಿವೃದ್ಧಿ ಯೋಜನೆಗಳ ಲಾಭ ಪಡೆದು ಉದ್ಯೋಗ ಅರಸುವ ಯುವಕರ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆಯೆಂದು ನಿಖರವಾಗಿ ತೋರಿಸುವ ಅಂಕಿ-ಸಂಖ್ಯೆಗಳು ಸಿಗುವದಿಲ್ಲ. ನಿರೀಕ್ಷೆ ಧಾರಾಳ, ಸಾಧನೆ ತೀರ ಸಣ್ಣ!
ಉದ್ಯೋಗ ಸೃಷ್ಟಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿಫಲವಾಗಿದೆಯೆಂಬ ವಿರೋಧ ಪಕ್ಷಗಳ ಟೀಕೆ ವ್ಯಾಪಕವಾಗುತಿದ್ದಂತೆ 2018-19ನೇ ಸಾಲಿನ ಬಜೆಟ್‌ನಲ್ಲಿ ಆಗ ಹಣ ಸಚಿವರಾಗಿದ್ದ ಅರುಣ ಜೇಟ್ಲಿ ಅವರು ರಾಷ್ಟ್ರೀಯ ಉದ್ಯೋಗ ನೀತಿ ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆ ವ್ಯಕ್ತವಾಗಿತ್ತು. ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ತೆರಿಗೆ ಕಡಿತಗಳಂತಹ ಹಣಕಾಸು ಉತ್ತೇಜನಾ ಕೊಡುಗೆಗಳನ್ನು ಜೇಟ್ಲಿ ಘೋಷಿಸಿದರೇ ಹೊರತು ಉದ್ಯೋಗ ನೀತಿಯನ್ನು ಪ್ರಕಟಿಸಲಿಲ್ಲ.
ಉತ್ತೇಜನಾ ಕೊಡುಗೆಗಳಿಂದ 2018-19ನೇ ಸಾಲಿನಲ್ಲಿ 70 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದೆಂಬ ಅವರ ಆಶಯ ಹುಸಿಯಾಯಿತು. ಉತ್ಪಾದಕತೆಯುಳ್ಳ ಉದ್ಯೋಗಾವಕಾಶಗಳು ಸೃಷ್ಟಿಯಾಗದೆ ಆರ್ಥಿಕ ಬೆಳವಣಿಗೆ ದರ ಶೇ 4.5ಕ್ಕೆ ಕುಸಿದಿರುವುದು ಕೂಡ ಈಗ ರಾಷ್ಟ್ರಮಟ್ಟದಲ್ಲಿ ಉದ್ಯೋಗ ನೀತಿಯ ಅಗತ್ಯವನ್ನು ತೋರಿಸುತ್ತದೆ. ಸಂಘಟಿತ ವಲಯದಲ್ಲಾದ ಉದ್ಯೋಗರಹಿತ ಅಭಿವೃದ್ಧಿ ಅಪಾಯಕಾರಿ. ಅಸಂಘಟಿತ ವಲಯದಲ್ಲಿರುವ ಅಭಿವೃದ್ಧಿರಹಿತ ಉದ್ಯೋಗ ಅಹಿತಕಾರಿ. ಈ ಜಟಿಲ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಉದ್ಯೋಗ ನೀತಿ ಈಗ ರಾಷ್ಟ್ರದ ಅಗತ್ಯಗಳಲ್ಲಿ ಒಂದಾಗಿದೆ.
ನಿರುದ್ಯೋಗ ಸಮಸ್ಯೆಯನ್ನು ಸರಿಯಾಗಿ ಪರಿಚಯಿಸುವ ಅಂಕಿ-ಅಂಶಗಳನ್ನು ಕಲೆ ಹಾಕುವ ಪ್ರಯತ್ನ ತಮ್ಮ ಸರ್ಕಾರದಿಂದ ಆಗಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಅದನ್ನು ಈಡೇರಿಸುವ ಉದ್ದೇಶವುಳ್ಳ ಉದ್ಯೋಗ ನೀತಿ ಘೋಷಣೆಯಾಗಬೇಕಾಗಿದೆ. ವಲಯವಾರು ಉದ್ಯೋಗಾವಕಾಶಗಳನ್ನು ಪರಿಚಯಿಸುವ ಅಂಕಿ-ಅಂಶಗಳನ್ನು ಸಂಗ್ರಹಿಸುವ ಜತೆಗೆ, ಕಾಲ ಕಾಲಕ್ಕೆ ಸರಿಯಾಗಿ ಅವುಗಳನ್ನು ಪರಿಷ್ಕರಿಸಲು ಬೇಕಾದ ಸಾಂಸ್ಥಿಕ ವ್ಯವಸ್ಥೆಯನ್ನೂ ರೂಪಿಸಬೇಕಾಗಿದೆ.
ಪ್ರತಿವರ್ಷ 1 ಕೋಟಿಗೂ ಹೆಚ್ಚು ಮಂದಿ ಹೊಸ ಉದ್ಯೋಗಾಕಾಂಕ್ಷಿಗಳು ಬರುತ್ತಿರುವುದರಿಂದ ಸರ್ಕಾರಿ ಮತ್ತು ಖಾಸಗಿ ವಲಯಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಗುಣಮಟ್ಟದ ಉದ್ಯೋಗ ಸೃಷ್ಟಿಗೆ ಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ಈ ನೀತಿ ಪೂರೈಸಬೇಕು. ಉದ್ಯೋಗ ಸೃಷ್ಟಿಗೆ ಇರುವ ಅಡೆತಡೆಗಳನ್ನು ನಿವಾರಿಸುವುದಲ್ಲದೆ, ಹೆಚ್ಚು ಉದ್ಯೋಗಾವಕಾಶ ಸೃಷ್ಟಿಯ ಉದ್ಯಮ, ವಾಣಿಜ್ಯ ಮತ್ತು ವ್ಯವಹಾರಗಳನ್ನು ನಡೆಸುವವರಿಗೆ ಸರ್ಕಾರ ನೀಡುವ ಉತ್ತೇಜನಾ ಕೊಡುಗೆಗಳನ್ನು ವಿಶದಪಡಿಸಬೇಕಾಗಿದೆ. ಒಳಗೊಳ್ಳುವಿಕೆಯ ಆರ್ಥಿಕ ಅಭಿವೃದ್ಧಿಗೆ ಈ ಉತ್ತೇಜನಗಳು ದಾರಿ ಮಾಡಬೇಕು.
ವರ್ಷ ಕಳೆದಂತೆ ಕಾರ್ಮಿಕ ವಲಯದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇಳಿಕೆಯಾಗಿರುವುದು ಖಂಡಿತ ಅಪೇಕ್ಷಿತ ಬದಲಾವಣೆಯಲ್ಲ. ಜಿಡಿಪಿ ವರ್ಧನೆಗೆ ಮಹಿಳೆಯರು ನೆರವಾಗಬೇಕಾದರೆ ರಾಷ್ಟ್ರೀಯ ಉದ್ಯೋಗ ನೀತಿಯು ಅವರಿಗೂ ನೆರವಾಗಬೇಕು. ದುಡಿಯುವ ಮಹಿಳೆಯರು ಅವರವರ ಕುಟುಂಬಗಳಿಗೆ ನಿಜವಾದ ಅರ್ಥದಲ್ಲಿ ನಾರಾಯಣಿಯರಾಗಬಲ್ಲರು ಎಂದು ಹೇಳುವಾಗ ನಿರ್ಮಲಾ ಸೀತಾರಾಮನ್ ಅವರ ಪ್ರಥಮ ಬಜೆಟ್ ಭಾಷಣದಲ್ಲಿದ್ದ ಸೊಲ್ಲು ನೆನಪಾಗುತ್ತದೆ.
(ಲೇಖಕ: ಪ್ರಾಧ್ಯಾಪಕ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ,ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮೂಡುಬಿದಿರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.