ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, 2024–25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹3,905 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ₹3,535 ಕೋಟಿ ಲಾಭ ಗಳಿಸಲಾಗಿತ್ತು. ವಸೂಲಾಗದ ಸಾಲದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಾಗಾಗಿ, ಲಾಭದಲ್ಲಿ ಏರಿಕೆಯಾಗಿದೆ ಎಂದು ಬ್ಯಾಂಕ್, ಗುರುವಾರ ಷೇರುಪೇಟೆಗೆ ತಿಳಿಸಿದೆ.
ಈ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ವರಮಾನ ₹34,020 ಕೋಟಿ ಆಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹29,823 ಕೋಟಿ ಗಳಿಸಿತ್ತು.
ಕಳೆದ ವರ್ಷ ₹28,701 ಕೋಟಿ ಬಡ್ಡಿ ವರಮಾನ ಗಳಿಸಿತ್ತು. ಈ ಬಾರಿ ₹25,004 ಕೋಟಿ ಗಳಿಸಿದೆ. ಬ್ಯಾಂಕ್‌ನ ವಸೂಲಾಗದ ಸಾಲದ ಸರಾಸರಿ ಪ್ರಮಾಣ (ಜಿಎನ್‌ಪಿಎ) ಶೇ 5.15ರಿಂದ ಶೇ 4.14ಕ್ಕೆ ಕುಗ್ಗಿದೆ. ನಿವ್ವಳ ಎನ್‌ಪಿಎ ಶೇ 1.57ರಿಂದ ಶೇ 1.24ಕ್ಕೆ ಇಳಿದಿದೆ.
ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹2,418 ಕೋಟಿಯಿಂದ ₹2,171 ಕೋಟಿಗೆ ಇಳಿಕೆಯಾಗಿದೆ. ಬಂಡವಾಳ ಪರ್ಯಾಪ್ತತಾ ಅನುಪಾತ (ಸಿಆರ್‌ಎಆರ್) ಶೇ 16.24ರಿಂದ ಶೇ 16.28ಕ್ಕೆ ಏರಿಕೆಯಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ವಸೂಲಾಗದ ಸಾಲಗಳಿಂದ ಉಂಟಾಗುವ ಭವಿಷ್ಯದ ನಷ್ಟ ಭರಿಸಲು ಪ್ರತಿಯೊಂದು ಬ್ಯಾಂಕ್ ಕೂಡ ತನ್ನ ಸ್ವಂತ ನಿಧಿಯಿಂದ ಒಂದಿಷ್ಟು ಪ್ರಮಾಣದ ಹಣವನ್ನು ಮೀಸಲಿಡಬೇಕಿದೆ. ಇದಕ್ಕೆ ಪ್ರಾವಿಜನ್ ಕವರೇಜ್ ರೇಷಿಯೊ (ಪಿಸಿಆರ್) ಎಂದು ಕರೆಯಲಾಗುತ್ತದೆ.
‘ಸದ್ಯ ಬ್ಯಾಂಕ್‌ನ ಪಿಸಿಆರ್ ಅನುಪಾತವು ಶೇ 89.22ರಷ್ಟು ಇದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗ ಈ ಅನುಪಾತವನ್ನು ಶೇ 90ರಷ್ಟು ದಾಟಿಸುವ ಗುರಿ ಹೊಂದಲಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಕೆ. ಸತ್ಯನಾರಾಯಣ ರಾಜು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.