ADVERTISEMENT

ಕೆನರಾ ಬ್ಯಾಂಕ್‌ಗೆ ₹3,757 ಕೋಟಿ ಲಾಭ

ಪಿಟಿಐ
Published 8 ಮೇ 2024, 11:03 IST
Last Updated 8 ಮೇ 2024, 11:03 IST
.....
.....   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌, 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹3,757 ಕೋಟಿ ಲಾಭಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹3,175 ಕೋಟಿ ಲಾಭಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ಶೇ 18ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌, ಷೇರುಪೇಟೆಗೆ ಮಾಹಿತಿ ನೀಡಿದೆ. 

ಕೊನೆಯ ತ್ರೈಮಾಸಿಕದಲ್ಲಿ ವರಮಾನವು ₹28,685 ಕೋಟಿಯಿಂದ ₹34,025 ಕೋಟಿಗೆ ಹೆಚ್ಚಳವಾಗಿದೆ. ಬಡ್ಡಿ ವರಮಾನವು ₹23,910 ಕೋಟಿಯಿಂದ ₹28,807 ಕೋಟಿಗೆ ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 5.35ರಿಂದ ಶೇ 4.23ಕ್ಕೆ ಕುಗ್ಗಿದೆ. ನಿವ್ವಳ ಎನ್‌ಪಿಎ ಶೇ 1.73ರಿಂದ ಶೇ 1.27ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹2,399 ಕೋಟಿಯಿಂದ ₹2,280 ಕೋಟಿಗೆ ತಗ್ಗಿದೆ. ಬಂಡವಾಳ ಪರ್ಯಾಪ್ತತಾ ಅನುಪಾತ (ಸಿಆರ್‌ಎಆರ್‌) ಶೇ 16.68ರಿಂದ ಶೇ 16.28ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.

ಲಾಭಾಂಶ: ₹10 ಮುಖಬೆಲೆಯ ಪ್ರತಿ ಷೇರಿಗೆ ₹16.10 ಲಾಭಾಂಶ ನೀಡಲು ಬ್ಯಾಂಕ್‌ನ ಆಡಳಿತ ಮಂಡಳಿಯು ಶಿಫಾರಸು ಮಾಡಿದೆ. ವಾರ್ಷಿಕ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತ ಬಳಿಕ ವಿತರಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.