ADVERTISEMENT

ಬಂಡವಾಳ ಮಾರುಕಟ್ಟೆ | ಷೇರು ವಂಚನೆ: ಪಾರಾಗುವುದು ಹೇಗೆ?

ಕಾವ್ಯ ಡಿ.
Published 12 ಆಗಸ್ಟ್ 2024, 0:45 IST
Last Updated 12 ಆಗಸ್ಟ್ 2024, 0:45 IST
<div class="paragraphs"><p>ಬಂಡವಾಳ ಹೂಡಿಕೆ (ಸಾಂದರ್ಭಿಕ ಚಿತ್ರ)</p></div>

ಬಂಡವಾಳ ಹೂಡಿಕೆ (ಸಾಂದರ್ಭಿಕ ಚಿತ್ರ)

   

ನೀವು ಹಣ ಕೊಟ್ಟರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭರ್ಜರಿ ಲಾಭ ಕೊಡುತ್ತೇವೆ. ಈ ಷೇರು ಖರೀದಿಸಿದರೆ ಕೆಲವೇ ದಿನಗಳಲ್ಲಿ ಡಬಲ್–ಟ್ರಿಪಲ್ ಆಗುತ್ತದೆ. ಹೀಗೆ ಜನಸಾಮಾನ್ಯರ ಮನವೊಲಿಸಿ ಅವರಿಂದ ಹಣ ಪಡೆದು ಷೇರು ಹೂಡಿಕೆಯ ಹೆಸರಲ್ಲಿ ವಂಚನೆ ಮಾಡುವ ಪ್ರಕರಣಗಳು ವ್ಯಾಪಕವಾಗಿವೆ.

ಈಗ  ಷೇರು ಹೂಡಿಕೆ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಎಷ್ಟಿದೆಯೋ, ಹೂಡಿಕೆ ಮೊತ್ತವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಹೇಗೆ ಎಂದು ಅರಿತುಕೊಳ್ಳುವ ಜರೂರು ಇದೆ. ಬನ್ನಿ, ಷೇರು ಮಾರುಕಟ್ಟೆ ವಂಚನೆಗಳಿಂದ ಪಾರಾಗುವುದು ಹೇಗೆ ಎನ್ನುವುದನ್ನು ತಿಳಿಯೋಣ.

ADVERTISEMENT

* ಕೃತಕವಾಗಿ ಷೇರಿನ ಬೆಲೆ ಏರಿಕೆ (ಪಂಪ್ ಆ್ಯಂಡ್‌ ಡಂಪ್ ಸ್ಕ್ಯಾಮ್): ಷೇರುಪೇಟೆಯಲ್ಲಿ ಕಡಿಮೆ ಮೌಲ್ಯ ಹೊಂದಿರುವ ಸಾಮಾನ್ಯವಾಗಿ ₹10ರ ಒಳಗೆ ಬೆಲೆ ಹೊಂದಿರುವ ಸಣ್ಣ ಕಂಪನಿಗಳ ಪೆನ್ನಿ ಷೇರುಗಳಿರುತ್ತವೆ. ಈ ಷೇರುಗಳನ್ನು ಮಾರ್ಕೆಟ್ ಆಪರೇಟರ್‌ಗಳು ಅತಿಯಾಗಿ ಖರೀದಿಸಿ ಕೃತಕವಾಗಿ ಸರ‍್ರನೆ ಬೆಲೆ ಹೆಚ್ಚಳವಾಗುವಂತೆ ಮಾಡುತ್ತಾರೆ. ‌‌

ನಿರ್ದಿಷ್ಟ ಷೇರಿನ ಬೆಲೆ ಮೂರು ಪಟ್ಟು, ನಾಲ್ಕು ಪಟ್ಟು ಏರಲಿದೆ ಎಂಬ ಭಾವನೆ ಹುಟ್ಟಿಸುತ್ತಾರೆ. ಹೀಗಾದಾಗ ರಿಟೇಲ್ ಹೂಡಿಕೆದಾರರು ವ್ಯಾಪಕವಾಗಿ ಈ ಪೆನ್ನಿ ಷೇರುಗಳನ್ನು ಖರೀದಿಸುತ್ತಾರೆ. ರಿಟೇಲ್ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಈ ಷೇರುಗಳನ್ನು ಕೊಂಡಾಗ ಆ ಷೇರಿನ ಬೆಲೆ ಮತ್ತಷ್ಟು ಮೇಲೆ ಹೋಗುತ್ತದೆ. ಇಂತಹ ಸಂದರ್ಭದಲ್ಲಿ ಪೆನ್ನಿ ಷೇರುಗಳನ್ನು ಖರೀದಿಸಿರುವ ಮಾರ್ಕೆಟ್ ಆಪರೇಟರ್‌ಗಳು ದಿಢೀರ್ ಅಂತ ಆ ಷೇರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಿಕೊಳ್ಳುತ್ತಾರೆ.

ಆಪರೇಟರ್‌ಗಳು ಲಾಭ ಗಳಿಸಿಕೊಂಡ ಮೇಲೆ ಕ್ರಮೇಣ ಷೇರಿನ ಬೆಲೆ ಕುಸಿತದತ್ತ ಸಾಗುತ್ತದೆ. ಆಗ ಪೆನ್ನಿ ಷೇರಿನ ಬೆಲೆ ಏರಿಕೆ ಆಗಬಹುದು ಎಂದು ಭಾವಿಸಿ ಷೇರು ಖರೀದಿಸಿದ ಸಾಮಾನ್ಯ ರಿಟೇಲ್ ಹೂಡಿಕೆದಾರ ನಷ್ಟಕ್ಕೆ ಒಳಗಾಗುತ್ತಾನೆ. ಕೆಲವು ಸಂದರ್ಭಗಳಲ್ಲಿ ಕಂಪನಿಯ ಪ್ರವರ್ತಕರು ಸೇರಿದಂತೆ ಮಾರ್ಕೆಟ್
ಆಪರೇಟರ್‌ಗಳು ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸ್‌ಆ್ಯಪ್‌, ಟೆಲಿಗ್ರಾಂ, ಎಸ್ಎಂಎಸ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಹೂಡಿಕೆದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ.

₹20 ಬೆಲೆಯ ಷೇರು ₹200 ಆಗಲಿದೆ. ಹಣ ಡಬಲ್ ಆಗಲಿದೆ ಎಂಬ ಸಂದೇಶಗಳು ವಾಟ್ಸ್‌ಆ್ಯಪ್‌, ಎಸ್ಎಂಎಸ್ ಮುಂತಾದ ಕಡೆ ಹರಿದಾಡುತ್ತವೆ. ಈ ರೀತಿಯ ಮಾಹಿತಿ ನಂಬಿ ಹೂಡಿಕೆ ಮಾಡಿದರೆ ನೀವು ಪಂಪ್ ಆ್ಯಂಡ್‌ ಡಂಪ್ ಸ್ಕ್ಯಾಮ್‌ಗೆ ಸಿಲುಕುವ ಸಾಧ್ಯತೆ ಇರುತ್ತದೆ.

ಈ ಸ್ಕ್ಯಾಮ್‌ಗೆ ಸಿಲುಕಬಾರದು ಅಂದರೆ ಪೆನ್ನಿ ಸ್ಟಾಕ್‌ಗಳಿಂದ ದೂರ ಇರುವುದು ಒಳಿತು. ಯಾವುದಾದರು ಷೇರಿನ ಬೆಲೆ ದಿಢೀರ್ ಏರಿಳಿತ ಕಾಣುತ್ತಿದ್ದರೆ, ಕಾರಣವಿಲ್ಲದೆ ಷೇರಿನ ಅತಿಯಾದ ಖರೀದಿಯಾಗುತ್ತಿದ್ದರೆ ಅದು ಪಂಪ್ ಆ್ಯಂಡ್ ಡಂಪ್ ಸ್ಕ್ಯಾಮ್ ಆಗಿರಬಹುದು ಎಚ್ಚರ! ಯಾವುದೇ ಷೇರಿನಲ್ಲಿ ಹೂಡಿಕೆ ಮಾಡುವ ಮುನ್ನ ಸ್ವತಃ ಅಧ್ಯಯನಕ್ಕೆ ಮುಂದಾಗುವುದು ಒಳಿತು. ಷೇರುಗಳ ಅಧ್ಯಯನದ ಬಗ್ಗೆ ಸರಿಯಾದ ಅರಿವಿಲ್ಲ ಎಂತಾದರೆ ಮ್ಯೂಚುವಲ್ ಫಂಡ್ ಹೂಡಿಕೆ ಮಾಡುವುದು ಸೂಕ್ತ.

* ಷೇರು ಹೂಡಿಕೆ ಖಾತೆಗೆ ಕನ್ನ (ಫಿಶಿಂಗ್ ಲಿಂಕ್ ಸ್ಕ್ಯಾಮ್): ನಿಮ್ಮ ಸ್ಟಾಕ್ ಬ್ರೋಕರ್ ಹೆಸರು ಹೇಳಿಕೊಂಡು ಗ್ರಾಹಕ ಮಾಹಿತಿ (ಕೆವೈಸಿ) ಅಪ್‌ಡೇಟ್ ಮಾಡುವಂತೆ ಕೇಳಿ ನಕಲಿ ಎಸ್ಎಂಎಸ್ ಸಂದೇಶವನ್ನು ಆನ್‌ಲೈನ್  ಖದೀಮರು ಕಳುಹಿಸುತ್ತಾರೆ. ಅಪ್ಪಿತಪ್ಪಿ ಈ ನಕಲಿ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದರೆ ನಿಮ್ಮ ಡಿಮ್ಯಾಟ್ ಅಕೌಂಟ್‌ನ ವಿವರ, ಹೂಡಿಕೆ ವಿವರ ಎಲ್ಲವೂ ಕಳ್ಳರಿಗೆ ಸಿಗುತ್ತದೆ. ಆ ಮಾಹಿತಿ ಬಳಸಿಕೊಂಡು ನಿಮ್ಮ ಡಿಮ್ಯಾಟ್ ಖಾತೆಯಲ್ಲಿರುವ ಎಲ್ಲ ಷೇರುಗಳನ್ನು ಮಾರಾಟ ಮಾಡಿ ಅವರು ಹಣ ಗಳಿಸಿಕೊಳ್ಳುತ್ತಾರೆ.

ಕೆಲ ನಕಲಿ ಮಂದಿ ನೋಂದಾಯಿತ ಹೂಡಿಕೆ ಸಲಹೆಗಾರರು ಎಂದು ಹೇಳಿಕೊಂಡು ಹೂಡಿಕೆ ಮಾಹಿತಿ ಕದಿಯಲು ಪ್ರಯತ್ನಿಸುತ್ತಾರೆ. ನೀವು ಟೂ ಫ್ಯಾಕ್ಟರ್ ಅಥೆಂಟಿಕೇಷನ್ ಜಾರಿಯಲ್ಲಿಡದಿದ್ದರೆ ಕಳ್ಳರಿಗೆ ನಿಮ್ಮ ಇ- ಮೇಲ್‌ ಐಡಿ ಕದಿಯುವುದು ಸುಲಭವಾಗುತ್ತದೆ. ಇ-ಮೇಲ್‌ ಐಡಿ ಹ್ಯಾಕ್‌ ಮಾಡಿದರೆ ಷೇರು ಹೂಡಿಕೆ ಮೊತ್ತವನ್ನು ಕದಿಯಲು ಕಳ್ಳರಿಗೆ ಕಷ್ಟವಾಗುವುದಿಲ್ಲ.

ಈ ರೀತಿಯ ಸ್ಕ್ಯಾಮ್‌ಗಳಿಂದ ಪಾರಾಗಬೇಕಾದರೆ ಗೊತ್ತಿಲ್ಲದ ಲಿಂಕ್‌ಗಳ ಮೇಲೆ ಕ್ಲಿಕ್
ಮಾಡಬೇಡಿ. ಅಕೌಂಟ್ ಪಾಸ್‌ವರ್ಡ್ ಮುಂತಾದ ವಿವರವನ್ನು ಯಾರಿಗೂ ಕೊಡಬೇಡಿ. ಜೊತೆಗೆ ಮೊಬೈಲ್‌‌ನಲ್ಲಿ ಟೂ ಫ್ಯಾಕ್ಟರ್ ಅಥೆಂಟಿಕೇಷನ್ ಚಾಲ್ತಿಯಲ್ಲಿ ಇಡಿ.

* ಮನಿ ಡಬಲ್ ಹೆಸರಲ್ಲಿ ವಂಚನೆ: ಷೇರುಪೇಟೆಯಲ್ಲಿ ನಿಮ್ಮ ಪರವಾಗಿ ನಾವೂ ಹೂಡಿಕೆ ಮಾಡುತ್ತೇವೆ. ಹೂಡಿಕೆ ಮೊತ್ತವನ್ನು ಡಬಲ್ ಮಾಡಿಕೊಡುತ್ತೇವೆ. ಹೀಗೆ ಪುಸಲಾಯಿಸಿ ದೊಡ್ಡ ಮೊತ್ತವನ್ನು ಜನಸಾಮಾನ್ಯರಿಂದ ಪಡೆದುಕೊಂಡು ವಂಚನೆ ಮಾಡುವ ಜಾಲ ವ್ಯಾಪಕವಾಗಿದೆ. ಕರ್ನಾಟಕ ಸೇರಿ ದೇಶದಾದ್ಯಂತ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲೂ ಬ್ಯಾಂಕ್ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಹೊಂದಿರುವವರು, ನಿವೃತ್ತಿ ವೇಳೆ ದೊಡ್ಡ ಮೊತ್ತ ಪಡೆದುಕೊಳ್ಳುವ ಹಿರಿಯ ನಾಗರಿಕರನ್ನು ಕೇಂದ್ರೀಕರಿಸಿ ವಂಚನೆ ಎಸಗಲಾಗುತ್ತಿದೆ.

ಇನ್ನು ಕೆಲವರು ನೋಂದಾಯಿತ ಹಣಕಾಸು ಸಲಹೆಗಾರರು ಬ್ಯಾಂಕ್‌ನ ಹೂಡಿಕೆ ಎಕ್ಸಿಕ್ಯೂಟಿವ್‌ಗಳು ಎಂದು ಹೇಳಿಕೊಂಡು ಮೋಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ನಯವಂಚಕರ ಜಾಲಕ್ಕೆ ಬೀಳಬೇಡಿ.  ಅಧಿಕೃತ ಹೂಡಿಕೆ ಮಾರ್ಗಗಳ ಮೂಲಕ ಮಾತ್ರ ಷೇರು ವಹಿವಾಟು ನಡೆಸಿ.

ಮಧ್ಯವರ್ತಿಗಳ ಮೂಲಕ ಹೂಡಿಕೆ ಮಾಡುವುದಾದರೇ ಅವರ ನೋಂದಣಿ ವಿವರಗಳನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಹಣವನ್ನು ಸ್ಟಾಕ್‌ನಲ್ಲಿ ಬೇಗ ಡಬಲ್ ಮಾಡಿಕೊಡುತ್ತೇವೆ ಎಂದು ಯಾರಾದರೂ ಹೇಳಿದರೆ ಅವರನ್ನು ನಂಬಬೇಡಿ. ನಿಮ್ಮ ಪರಿಶ್ರಮದ ಹಣ ಕಳ್ಳರ ಪಾಲಾಗದಂತೆ ಎಚ್ಚರವಹಿಸಿ.

ಮತ್ತೆ ಕುಸಿದ ಷೇರುಪೇಟೆ 
ಷೇರು ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. 79705 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.58ರಷ್ಟು ಇಳಿಕೆ ಕಂಡಿದೆ. 24367 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 1.42ರಷ್ಟು ತಗ್ಗಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಭಾರತ ಮತ್ತು ಜಾಗತಿಕವಾಗಿ ಸ್ಥೂಲ ಆರ್ಥಿಕತೆಯಲ್ಲಿನ ನಕಾರಾತ್ಮಕತೆ ವಿದೇಶಿ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ ಲಾಭ ಗಳಿಕೆಗಾಗಿ ಷೇರುಗಳ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಶೇ 2.97 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.82 ಎನರ್ಜಿ ಶೇ 2.52 ಮಾಹಿತಿ ತಂತ್ರಜ್ಞಾನ ಶೇ 1.73 ನಿಫ್ಟಿ ಬ್ಯಾಂಕ್ ಶೇ 1.69 ನಿಫ್ಟಿ ಫೈನಾನ್ಸ್ ಶೇ 1.64 ರಿಯಲ್ ಎಸ್ಟೇಟ್ ಶೇ 1.44 ನಿಫ್ಟಿ ಆಟೊ ಶೇ 1.43 ಮತ್ತು ಅನಿಲ ಮತ್ತು ತೈಲ ಸೂಚ್ಯಂಕ ಶೇ 1.25ರಷ್ಟು ಕುಸಿದಿವೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 1.4 ಎಫ್‌ಎಂಸಿಜಿ ಶೇ 0.67 ಮತ್ತು ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 0.06ರಷ್ಟು ಗಳಿಸಿಕೊಂಡಿವೆ. ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್ ಶೇ 4.85 ಟಾಟಾ ಸ್ಟೀಲ್ ಶೇ 4.05 ಮಾರುತಿ ಸುಜುಕಿ ಶೇ 3.96 ಬಿಪಿಸಿಎಲ್ ಶೇ 3.95 ಇಂಡಸ್‌ ಇಂಡ್ ಬ್ಯಾಂಕ್ ಶೇ 3.87 ಅಲ್ಟ್ರಾಟೆಕ್ ಸಿಮೆಂಟ್ ಶೇ 3.85 ಟೈಟನ್ ಕಂಪನಿ ಶೇ 3.79 ಬಜಾಜ್ ಫಿನ್‌ಸರ್ವ್ ಶೇ 3.77 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 3.62 ಅದಾನಿ ಪೋರ್ಟ್ಸ್ ಶೇ 3.44ರಷ್ಟು ಮತ್ತು ಪವರ್ ಗ್ರಿಡ್ ಶೇ 3.32ರಷ್ಟು ಕುಸಿದಿವೆ. ಸಿಪ್ಲಾ ಶೇ 3.11 ಐಷರ್ ಮೋಟರ್ಸ್ ಶೇ 2.3 ಎಚ್‌ಯುಎಲ್ ಶೇ 2.05 ಐಟಿಸಿ ಶೇ 1.32 ಬಜಾಜ್ ಆಟೊ ಶೇ 1.19 ಜೆಎಸ್‌ಡಬ್ಲ್ಯು ಸ್ಟೀಲ್ ಶೇ 0.84 ಕೋಲ್ ಇಂಡಿಯಾ ಶೇ 0.83 ಅದಾನಿ ಎಂಟರ್ ಪ್ರೈಸಸ್ ಶೇ 0.77 ಒಎನ್‌ಜಿಸಿ ಶೇ 0.74 ಮತ್ತು ನೆಸ್ಲೆ ಇಂಡಿಯಾ ಶೇ 0.51ರಷ್ಟು ಹೆಚ್ಚಳ ಕಂಡಿವೆ. ಮುನ್ನೋಟ: ಷೇರುಪೇಟೆಯಲ್ಲಿ ಅನಿಶ್ಚಿತ ವಾತಾವರಣ ಇರಲಿದ್ದು ಸೂಚ್ಯಂಕಗಳು ತ್ವರಿತ ಮತ್ತು ಹರಿತ ಏರಿಳಿತ ಕಾಣಲಿವೆ. ಜಾಗತಿಕ ವಿದ್ಯಮಾನಗಳು ಮತ್ತು ದೇಶೀಯ ಬೆಳವಣಿಗೆಗಳನ್ನು ಆಧರಿಸಿ ಮಾರುಕಟ್ಟೆ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ವಾರ ಐಆರ್‌ಎಫ್‌ಸಿ ಎನ್‌ಎಂಡಿಸಿ ಎಂಟಾರ್ ಟೆಕ್ನಾಲಜೀಸ್ ಹಿಂಡಾಲ್ಕೋ ಇಂಡಸ್ಟ್ರೀಸ್ ಹೀರೊ ಮೋಟೊಕಾರ್ಪ್‌ ಐಆರ್‌ಸಿಟಿಸಿ ಎಚ್ಎಎಲ್ ಎಂಡೂರೆನ್ಸ್ ಟೆಕ್ನಾಲಜೀಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.