ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿ ಜರ್ಜರಿತವಾಗಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕತೆಯು ಧನಾತ್ಮಕ ಬೆಳವಣಿಗೆ ದಾಖಲಿಸಿದೆ ಎಂದು ಅಲ್ಲಿನ ಸರ್ಕಾರದ ಅಂಕಿ–ಅಂಶಗಳು ದೃಢಪಡಿಸಿವೆ.
‘ಜಿಡಿಪಿ ಬೆಳವಣಿಗೆ ದರವು ಪ್ರಸಕ್ತ ಹಣಕಾಸು ವರ್ಷದ ತ್ರೈಮಾಸಿಕ ಅವಧಿಯಲ್ಲಿ ಶೇ 1.6ರಷ್ಟದಾಗಿದೆ. ಇದು ಚೇತರಿಕೆ ಹಾದಿಯ ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ಗಣತಿ ಮತ್ತು ಸಾಂಖಿಕ್ಯ (ಡಿಸಿಎಸ್) ಇಲಾಖೆಯು ಶುಕ್ರವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ವಿವರಿಸಲಾಗಿದೆ.
2021ನೇ ಸಾಲಿನ ನಾಲ್ಕನೇ ತ್ರೈಮಾಸಿಕದಿಂದ ಶ್ರೀಲಂಕಾದ ಆರ್ಥಿಕತೆಯು ಋಣಾತ್ಮಕ ಹಾದಿ ಹಿಡಿದಿತ್ತು. 2022ರ ಏಪ್ರಿಲ್‌ನಲ್ಲಿ ಜಿಡಿಪಿಯು ಶೇ (–) 8ರಷ್ಟು ದಾಖಲಾಗಿದೆ ಎಂದು ಸರ್ಕಾರ ಘೋಷಿಸಿತ್ತು.
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ದ್ವೀಪ ರಾಷ್ಟ್ರದ ನೆರವಿಗೆ ಧಾವಿಸಿದ್ದ ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಈ ವಾರದ ಆರಂಭದಲ್ಲಿ ₹2.90 ಲಕ್ಷ ಕೋಟಿ ನೆರವು ಪ್ರಕಟಿಸಿತ್ತು. 2024ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯು ಮತ್ತಷ್ಟು ವೃದ್ಧಿಯಾಗಲಿದೆ ಎಂದು ಶ್ರೀಲಂಕಾ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.