ADVERTISEMENT

ನೋಟು ರದ್ಧತಿಗೆ 6 ವರ್ಷ: ನಗದು ಹರಿವಿನ ಪ್ರಮಾಣ ಭಾರೀ ಹೆಚ್ಚಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2022, 13:57 IST
Last Updated 6 ನವೆಂಬರ್ 2022, 13:57 IST
   

ಮುಂಬೈ: ದೇಶದ ಜನರ ಕೈಯಲ್ಲಿ ಚಲಾವಣೆಯಲ್ಲಿ ಇರುವ ನಗದು ಹಣದ ಮೊತ್ತವು ಅಕ್ಟೋಬರ್ 21ರ ಹೊತ್ತಿಗೆ ₹ 30.88 ಲಕ್ಷ ಕೋಟಿಗೆ ಏರಿಕೆ ಆಗಿದೆ. ನೋಟು ರದ್ದತಿಯು ಜಾರಿಗೆ ಬಂದು ಆರು ವರ್ಷಗಳ ನಂತರವೂ, ದೇಶದಲ್ಲಿ ನಗದು ಚಲಾವಣೆ ಹೆಚ್ಚುತ್ತಲೇ ಇದೆ ಎಂಬುದನ್ನು ಇದು ಹೇಳುತ್ತಿದೆ.

2016ರ ನವೆಂಬರ್‌ 4ರಂದು ಜನರ ಕೈಯಲ್ಲಿ ಚಲಾವಣೆಯಲ್ಲಿ ಇದ್ದ ನಗದು ಹಣದ ಮೊತ್ತಕ್ಕೆ ಹೋಲಿಸಿದರೆ, ಈ ವರ್ಷದ ಅಕ್ಟೋಬರ್ 21ರಂದು ಜನರ ಕೈಯಲ್ಲಿ ಚಲಾವಣೆಯಲ್ಲಿ ಇದ್ದ ನಗದು ಹಣದ ಪ್ರಮಾಣವು ಶೇಕಡ 71.84ರಷ್ಟು ಹೆಚ್ಚು. ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರುವುದಾಗಿ 2016ರ ನವೆಂಬರ್ 8ರಂದು ಘೋಷಿಸಿದ್ದರು.

ದೇಶದಲ್ಲಿ ಭ್ರಷ್ಟಾಚಾರ ಹಾಗೂ ಕಪ್ಪು ಹಣವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದರು. ಆರ್‌ಬಿಐ ಮಾಹಿತಿ ಪ್ರಕಾರ 2016ರ ನವೆಂಬರ್‌ 4ರಂದು ಜನರ ಕೈಯಲ್ಲಿ ಚಲಾವಣೆಯಲ್ಲಿ ಇದ್ದ ನಗದು ಹಣದ ಮೊತ್ತ ₹ 17.7 ಲಕ್ಷ ಕೋಟಿ.

ADVERTISEMENT

ಬಳಸಲು ಸುಲಭವಾದ ಹಾಗೂ ಹೊಸ ಬಗೆಯ ಡಿಜಿಟಲ್ ಪಾವತಿ ವ್ಯವಸ್ಥೆಗಳು ದೇಶದಲ್ಲಿ ಜನಪ್ರಿಯ ಆಗುತ್ತಿದ್ದರೂ, ಜನರು ನಗದು ಹಣವನ್ನು ಬಳಕೆ ಮಾಡುವುದು ನಿರಂತರವಾಗಿ ಏರಿಕೆ ಕಾಣುತ್ತಿದೆ.

ಈಚೆಗೆ ಸಿದ್ಧಪಡಿಸಿದ ವರದಿಯೊಂದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು, ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಚಲಾವಣೆಯಲ್ಲಿನ ನಗದು ಹಣವು ₹ 7,600 ಕೋಟಿಯಷ್ಟು ಕಡಿಮೆ ಆಗಿದೆ ಎಂದು ಹೇಳಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಹೀಗೆ ಆಗಿರುವುದು ಸರಿಸುಮಾರು ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲು ಎಂದು ಎಸ್‌ಬಿಐ ಹೇಳಿದೆ.

ಜಾಗತಿಕ ಹಣಕಾಸು ಬಿಕ್ಕಟ್ಟು ಇದ್ದ 2009ರಲ್ಲಿ ಮಾತ್ರ ದೀಪಾವಳಿ ಹೊತ್ತಿನಲ್ಲಿ ನಗದು ಹಣದ ಚಲಾವಣೆಯು ಕಡಿಮೆ ಆಗಿತ್ತು ಎಂದು ಎಸ್‌ಬಿಐ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.