ನವದೆಹಲಿ: 2020–21ನೇ ಸಾಲಿನ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್) ಗಡುವನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) 2022ರ ಮಾರ್ಚ್ 15ರ ವರೆಗೆ ವಿಸ್ತರಿಸಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಇದರೊಂದಿಗೆ ಮೂರನೇ ಬಾರಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ಗಡುವನ್ನು ವಿಸ್ತರಿಸಿದಂತಾಗಿದೆ. ಈ ಹಿಂದೆ ಲೆಕ್ಕಪತ್ರ ಸಲ್ಲಿಕೆಗೆ 2021ರ ಡಿಸೆಂಬರ್ 31ರ ಗಡುವು ನಿಗದಿಪಡಿಸಲಾಗಿತ್ತು.
‘ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಮತ್ತು ವಿವಿಧ ಆಡಿಟ್ ವರದಿಗಳನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಸಲ್ಲಿಸುವುದಕ್ಕೆ ಸಂಬಂಧಿಸಿದ ತೊಂದರೆಗಳ ಬಗ್ಗೆ ತೆರಿಗೆ ಪಾವತಿದಾರರು ವರದಿ ಮಾಡಿರುವ ಕಾರಣ 2020–21ನೇ ಸಾಲಿನ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ಗಡುವನ್ನು ವಿಸ್ತರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2020–21ನೇ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ಇ–ವೆರಿಫಿಕೇಷನ್‌ಗೆ ಫೆಬ್ರುವರಿ 28ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಇತ್ತೀಚೆಗಷ್ಟೇ ಸಿಬಿಡಿಟಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.