ADVERTISEMENT

ನವೋದ್ಯಮಗಳಲ್ಲಿ ಹೂಡಿಕೆ: ಏಂಜೆಲ್ ತೆರಿಗೆ ವಿನಾಯಿತಿ

21 ದೇಶಗಳ ಪಟ್ಟಿ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವಾಲಯ

ಪಿಟಿಐ
Published 25 ಮೇ 2023, 15:46 IST
Last Updated 25 ಮೇ 2023, 15:46 IST

ನವದೆಹಲಿ: ಷೇರುಪೇಟೆಯಲ್ಲಿ ನೋಂದಾಯಿತ ಆಗಿರದ ಭಾರತದ ನವೋದ್ಯಮಗಳಲ್ಲಿ, 21 ದೇಶಗಳ ಅನಿವಾಸಿ ಭಾರತೀಯರು ಮಾಡುವ ಹೂಡಿಕೆಗಳಿಗೆ ಏಂಜೆಲ್ ತೆರಿಗೆಯಿಂದ ವಿನಾಯಿತಿ ನೀಡಲಾಗಿದ್ದು, ಈ ದೇಶಗಳ ಪಟ್ಟಿಯನ್ನು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ಅಮೆರಿಕ, ಬ್ರಿಟನ್, ಫ್ರಾನ್ಸ್‌ ವಿನಾಯಿತಿ ಪಡೆದಿರುವ ದೇಶಗಳ ಪಟ್ಟಿಯಲ್ಲಿ ಇವೆ. ಆದರೆ, ಸಿಂಗಪುರ, ನೆದರ್ಲೆಂಡ್ಸ್ ಮತ್ತು ಮಾರಿಷಸ್ ಈ ಪಟ್ಟಿಯಲ್ಲಿ ಇಲ್ಲ.

ಷೇರುಪೇಟೆಯಲ್ಲಿ ನೋಂದಾಯಿತ ಆಗಿರದ ಕಂಪನಿಗಳಲ್ಲಿ ವಿದೇಶಗಳಿಂದ ಆಗುವ ಹೂಡಿಕೆಗೆ ಏಂಜೆಲ್ ತೆರಿಗೆ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಹೇಳಿತ್ತು. ಡಿಪಿಐಐಟಿ (ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ) ಮಾನ್ಯತೆ ಪಡೆದಿರುವ ನವೋದ್ಯಮಗಳಿಗೆ ಈ ತೆರಿಗೆಯಿಂದ ವಿನಾಯಿತಿ ಇತ್ತು.

ADVERTISEMENT

ಆದರೆ, ನವೋದ್ಯಮಗಳು ಮತ್ತು ವೆಂಚರ್ ಕ್ಯಾಪಿಟಲ್ ಕಂಪನಿಗಳು ಕೆಲವು ಹೂಡಿಕೆದಾರರಿಗೆ ಈ ತೆರಿಗೆಯಿಂದ ವಿನಾಯಿತಿ ಕೊಡಬೇಕು ಎಂಬ ಮನವಿ ಸಲ್ಲಿಸಿದ್ದವು.

ಆಸ್ಟ್ರಿಯಾ, ಕೆನಡಾ, ಜೆಕ್ ಗಣರಾಜ್ಯ, ಬೆಲ್ಜಿಯಂ, ಡೆನ್ಮಾರ್ಕ್, ಫಿನ್ಲೆಂಡ್, ಇಸ್ರೇಲ್, ಇಟಲಿ, ಐಸ್‌ಲೆಂಡ್‌, ಜಪಾನ್, ಕೊರಿಯಾ, ರಷ್ಯಾ, ನಾರ್ವೆ, ನ್ಯೂಜಿಲೆಂಡ್ ಮತ್ತು ಸ್ವೀಡನ್ ದೇಶಗಳಿಂದ ಮಾಡುವ ಹೂಡಿಕೆಗಳಿಗೆ ಕೂಡ ಏಂಜೆಲ್ ತೆರಿಗೆಯಿಂದ ವಿನಾಯಿತಿ ಇರಲಿದೆ. ಈ ವಿನಾಯಿತಿ ಏಪ್ರಿಲ್‌ 1ರಿಂದ ಪೂರ್ವಾನ್ವಯ ಆಗಲಿದೆ.

ಮೊದಲಿನ ನಿಯಮಗಳ ಅನ್ವಯ, ದೇಶಿ ಹೂಡಿಕೆದಾರರು ಅಥವಾ ನಿವಾಸಿ ಭಾರತೀಯರು, ಷೇರುಪೇಟೆಯಲ್ಲಿ ನೋಂದಾಯಿತ ಅಲ್ಲದ ಕಂಪನಿಗಳಲ್ಲಿ ಅವುಗಳ ನ್ಯಾಯಸಮ್ಮತ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಮಾಡುವ ಹೂಡಿಕೆಗಳಿಗೆ ಮಾತ್ರ ಏಂಜೆಲ್ ತೆರಿಗೆ ವಿಧಿಸಲಾಗುತ್ತಿತ್ತು.

ಆದರೆ ಈ ನಿಯಮಕ್ಕೆ ಹಣಕಾಸು ಕಾಯ್ದೆ 2023ರ ಮೂಲಕ ಬದಲಾವಣೆ ತರಲಾಯಿತು. ಕಾಯ್ದೆಯು, ನ್ಯಾಯಸಮ್ಮತ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಮಟ್ಟದಲ್ಲಿ ಆಗುವ ಹೂಡಿಕೆಯು ಯಾರಿಂದಲೇ ಆಗಿದ್ದರೂ ಅದಕ್ಕೆ ಏಂಜೆಲ್ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.