ನವದೆಹಲಿ: ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್ ಕರೆ ಮಾಡಿ ಹಣ ದೋಚುವವರ ಬಗ್ಗೆ ನಾಗರಿಕರು ಜಾಗರೂಕರಾಗಿರಬೇಕು ಎಂದು ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ತಿಳಿಸಿದೆ.
‘ಭಾರತೀಯ ಕಸ್ಟಮ್ಸ್ ಅಧಿಕಾರಿಗಳೆಂದು ಹೇಳಿಕೊಂಡು ವಂಚಕರು ಕೃತ್ಯ ಎಸಗುತ್ತಿದ್ದಾರೆ. ಇಂತಹ ಕೃತ್ಯಗಳ ಬಗ್ಗೆ ಸುದ್ದಿ ತಾಣಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳು ಪ್ರಕಟವಾಗುತ್ತಿವೆ. ಸಾರ್ವಜನಿಕರು ಕಷ್ಟಪಟ್ಟು ಗಳಿಸಿದ ಹಣವನ್ನು ಲಪಟಾಯಿತ್ತಿದ್ದಾರೆ’ ಎಂದು ಸಿಬಿಐಸಿ ಹೇಳಿದೆ.
ಇಂತಹ ಕೃತ್ಯ ಎಸಗಲು ವಂಚಕರು ಮೊಬೈಲ್ ಕರೆ ಅಥವಾ ಸಂದೇಶವನ್ನು ಬಳಸಿಕೊಳ್ಳುತ್ತಾರೆ. ನೀವು ತೆರಿಗೆ ಪಾವತಿಯಲ್ಲಿ ತಪ್ಪೆಸಗಿದ್ದೀರಿ. ಹಾಗಾಗಿ, ದಂಡಾರ್ಹ ಕ್ರಮಕೈಗೊಳ್ಳುವುದಾಗಿ ಭಯ ಹುಟ್ಟಿಸಿ ಹಣ ವಸೂಲಿ ಮಾಡುತ್ತಾರೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.
ಈ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು, ಎಸ್‌ಎಂಎಸ್, ಇ–ಮೇಲ್ ಸಂದೇಶ ರವಾನೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನದ ಮೂಲಕ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.