ಚಿಕ್ಕಮಗಳೂರು: ಕಾಫಿ ಉದ್ಯಮಿ ದಿವಂಗತ ವಿ.ಜಿ. ಸಿದ್ಧಾರ್ಥ ಹೆಗ್ಡೆ ಒಡೆತನದ ಕಾಫಿ ಡೇ ಎಂಟರ್‌ಪ್ರೈಸಸ್ ಆರ್ಥಿಕ ಸಂಕಷ್ಟದಲ್ಲಿದ್ದು, ವ್ಯಾಪಾರವಿಲ್ಲದ ಕೆಫೆ ಕಾಫಿ ಡೇಗಳನ್ನು ‘ಕಾಫಿ ಡೇ ಎಸೆನ್ಶಿಯಲ್ಸ್’ (ದಿನಸಿ ಮಾರಾಟ) ಮಳಿಗೆಗಳಾಗಿ ಪರಿವರ್ತಿಸುವತ್ತ ಗಮನ ಹರಿಸಿದೆ.
ಈ ಕಾರ್ಯಕ್ಕೆ ಜಪಾನಿನ ಕಂಪನಿಯೊಂದು ಕೈಜೋಡಿಸಿದೆ. ಕೆಲವೆಡೆ ಈಗಾಗಲೇ ಕೆಫೆಗಳನ್ನು ಪರಿವರ್ತಿಸಲಾಗಿದೆ.
‘ಕಾಫಿ ಡೇ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾಗಿ ಮಾಳವಿಕಾ ಸಿದ್ಧಾರ್ಥ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಮಗ ಅರ್ಮತ್ಯ ಅವರು ಸಾಥ್ ನೀಡುತ್ತಿದ್ದಾರೆ. ಉದ್ಯಮದ ಪುನಶ್ಚೇತನಕ್ಕೆ ಗಮನ ಹರಿಸಿದ್ದಾರೆ’ ಎಂದು ಕಾಫಿ ಡೇ ಉದ್ದಿಮೆಯ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ವ್ಯಾಪಾರ ಹಾಗೂ ಲಾಭ ಇಲ್ಲದ ಕಾಫಿ ಡೇ ಕೆಫೆಗಳನ್ನು ಕಾಫಿ ಡೇ ಎಸೆನ್ಶಿಯಲ್ ಮಳಿಗೆಗಳಾಗಿ ಪರಿವರ್ತಿಸಲಾಗುತ್ತಿದೆ. ಎರಡೂ ಕಂಪನಿಗಳದ್ದು ಶೇ 50:50 ಪಾಲುದಾರಿಕೆ ಇದೆ. ಬೆಂಗಳೂರಿನಲ್ಲಿ ಮೂರು ಕಡೆ ಮಳಿಗೆಗಳು ಆರಂಭವಾಗಿವೆ. ಮಳಿಗೆಗಳಲ್ಲಿ ದಿನಸಿ, ಪೇಯ ಇತ್ಯಾದಿ ಲಭ್ಯ ಇವೆ’ ಎಂದು ಅವರು ವಿವರಿಸಿದರು.
‘ಉದ್ದಿಮೆ ಆರ್ಥಿಕ ಸಂಕಷ್ಟದಲ್ಲಿದೆ.ಕಾಫಿ ಡೇ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಘಟಾನುಘಟಿ ಉದ್ಯಮಿಗಳೊಂದಿಗೆ ಮಾತುಕತೆಯೂ ನಡೆದಿದೆ. ಸಿದ್ಧಾರ್ಥ ಒಡೆತನದ ಕಾಫಿಯೇತರ ಕಂಪನಿಗಳನ್ನು ಕೈಬಿಟ್ಟು ಅಥವಾ ಮಾರಾಟ ಮಾಡಿ, ಕಾಫಿ ಉದ್ದಿಮೆ ಮಾತ್ರ ನಡೆಸುವ ಚಿಂತನೆ ನಡೆದಿದೆ. ಬೆಳೆಗಾರರ ಬಾಕಿ ಪಾವತಿಸುವ ಬಗ್ಗೆಯೂ ಚರ್ಚೆ ನಡೆದಿದೆ’ ಎಂದು ಅವರು ತಿಳಿಸಿದರು.
ಚಿಕ್ಕಮಗಳೂರಿನ ಕಾಫಿ ಡೇ ಗ್ಲೋಬಲ್ ಘಟಕ (ಎಬಿಸಿ– ಅಮಾಲ್ಗಮೇಟೆಡ್ ಬೀನ್ ಕಂಪನಿ) ಸದ್ಯಕ್ಕೆ ಕಾಫಿ ಖರೀದಿಸುತ್ತಿಲ್ಲ. ಮಾರಾಟ ಮಾಡಿದ್ದ ಕಾಫಿಯ ಬಾಕಿ ಪಾವತಿಸುವಂತೆ ಬೆಳೆಗಾರರು ಕಂಪನಿಗೆ ಎಡತಾಕುವಂತಾಗಿದೆ.
‘ಬಾಕಿಯಲ್ಲಿ ಸ್ವಲ್ಪ ಕೊಟ್ಟಿದ್ದಾರೆ. ಉಳಿದದ್ದನ್ನು ಕೆಲ ತಿಂಗಳಲ್ಲಿ ಪಾವತಿಸುವುದಾಗಿ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಸಂಕಷ್ಟದ ಸ್ಥಿತಿ ಇರುವುದರಿಂದ ಸುಮ್ಮನಿದ್ದೇವೆ’ ಎಂದು ಕಾಫಿ ಬೆಳೆಗಾರ ಷಣ್ಮುಖ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.