ನವದೆಹಲಿ: ಏರ್ ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಏರ್ ಇಂಡಿಯಾ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಮಂಗಳವಾರ ಅನುಮೋದನೆ ನೀಡಿದೆ.
ಈ ಕುರಿತು ಸಿಸಿಐ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಲಾಗಿದೆ.
ಟಾಟಾ ಸನ್ಸ್ ಒಡೆತನದ ಏರ್ ಇಂಡಿಯಾ ಕಂಪನಿಯು ಏರ್ ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಯ ಎಲ್ಲ ಷೇರುಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಿಸಿಐ ಟ್ವೀಟ್ ಉಲ್ಲೇಖಿಸಿದೆ.
ಏರ್ ಏಷ್ಯಾ ಇಂಡಿಯಾದ ಎಲ್ಲ ಷೇರುಗಳನ್ನು ಖರೀದಿಸುವ ಬಗ್ಗೆ ಏರ್ ಇಂಡಿಯಾ ಏಪ್ರಿಲ್‌ನಲ್ಲಿ ಸ್ಪರ್ಧಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಏರ್ ಏಷ್ಯಾ ಇಂಡಿಯಾ ಸ್ವಾಧೀನದಿಂದ ದೇಶದ ವಿಮಾನಯಾನ ಕ್ಷೇತ್ರದಲ್ಲಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಕೆಟ್ಟ ಬದಲಾವಣೆ ಆಗುವುದಿಲ್ಲ ಎಂದು ಪ್ರಸ್ತಾವದಲ್ಲಿ ಹೇಳಲಾಗಿತ್ತು.
ಏರ್ ಏಷ್ಯಾದ ಶೇ 83.67ರಷ್ಟು ಷೇರುಗಳು ಈಗಾಗಲೇ ಟಾಟಾ ಸಮೂಹದ ಬಳಿ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.