ADVERTISEMENT

‘ಸಿಡಿಇಎಲ್‌’ ಸಾಲ ₹ 5,200 ಕೋಟಿ

ಕೆಫೆ ಕಾಫಿ ಡೇ ಕಂಪನಿಯ ಪ್ರವರ್ತಕರ ಷೇರು ಅಡಮಾನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:28 IST
Last Updated 1 ಆಗಸ್ಟ್ 2019, 20:28 IST
.
.   

ನವದೆಹಲಿ:ಸಿದ್ಧಾರ್ಥ ಅವರ ಒಡೆತನದ ಕಾಫಿ ಡೇ ಎಂಟರ್‌ಪ್ರೈಸಿಸ್‌ ಲಿಮಿಟೆಡ್‌ನ (ಸಿಡಿಇಎಲ್‌) ಸದ್ಯದ ಸಾಲದ ಪ್ರಮಾಣವು ಹಿಂದಿನ ಹಣಕಾಸು ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಳಗೊಂಡಿದೆ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ ‘ಸಿಡಿಇಎಲ್‌’ನ ಸದ್ಯದ ಸಾಲದ ಮೊತ್ತವು ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ₹ 5,251 ಕೋಟಿಗಳಷ್ಟಿದೆ. ವರ್ಷದ ಹಿಂದೆ ಈ ಸಾಲದ ಪ್ರಮಾಣವು ₹ 2,457.3 ಕೋಟಿಗಳಷ್ಟಿತ್ತು.

ಷೇರುಪೇಟೆಯಲ್ಲಿ ವಹಿವಾಟು ನಡೆಸದ ರಿಯಾಲಿಟಿ ಮತ್ತು ಹೋಟೆಲ್‌ ಉದ್ದಿಮೆ ಸಂಸ್ಥೆಗಳ ಸಾಲದ ಮೊತ್ತವೂ ಗಮನಾರ್ಹ ಮಟ್ಟದಲ್ಲಿ ಇರುವುದು ಷೇರುಪೇಟೆ ಮತ್ತು ಕಂಪನಿ ವ್ಯವಹಾರ ಸಚಿವಾಲಯಕ್ಕೆ ಸಲ್ಲಿಸಿರುವ ಮಾಹಿತಿಯಿಂದ ತಿಳಿದು ಬರುತ್ತದೆ.

ADVERTISEMENT

ಸಿದ್ಧಾರ್ಥ ಅವರು ತಮ್ಮ ಕಾಫಿ ಯೇತರ ವಹಿವಾಟಿಗೆ ಬ್ಯಾಂಕ್‌, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿ ದ್ದಾರೆ. ‘ಸಿಡಿಇಎಲ್‌’ನ ಪ್ರವರ್ತಕ ಕಂಪನಿಗಳಾದ ದೇವದರ್ಶಿನಿ ಇನ್ಫೊ ಟೆಕ್ನಾಲಜೀಸ್‌, ಕಾಫಿ ಡೇ ಕನ್ಸೊಲಿಡೇಷನ್ಸ್‌, ಗೋಣಿಬೀಡು ಕಾಫಿ ಎಸ್ಟೇಟ್ಸ್‌ ಮತ್ತು ಸಿವನ್‌ ಸೆಕ್ಯುರಿಟೀಸ್‌ ಕೂಡ ಕಾಲ ಕಾಲಕ್ಕೆ ದೊಡ್ಡ ಮೊತ್ತದ ಸಾಲ ಪಡೆದಿವೆ.

ಕನಿಷ್ಠ ₹ 12 ಕೋಟಿ ಸಾಲ ಪಡೆದ ನಿದರ್ಶನವೂ ಇದೆ. ಟಾಟಾ ಕ್ಯಾಪಿಟಲ್‌ ಫೈನಾನ್ಶಿಯಲ್‌ ಸರ್ವಿಸ್‌, ಕ್ಲಿಕ್ಸ್‌ ಕ್ಯಾಪಿಟಲ್‌ ಸರ್ವಿಸಸ್‌, ಶಪೂರ್ಜಿ ಪಲ್ಲೊಂಜಿ ಫೈನಾನ್ಸ್‌ನಿಂದಲೂ ಸಾಲ ಪಡೆಯಲಾಗಿದೆ. 2017ರಿಂದ ಸಾಲ ಪಡೆಯುವ ಪ್ರಮಾಣ ಹೆಚ್ಚಳಗೊಂಡಿದೆ.

ಪಾಲು ಬಂಡವಾಳ ವಿವರ: ‘ಸಿಡಿಇಎಲ್‌’ನಲ್ಲಿ ಸಿದ್ಧಾರ್ಥ ಅವರು ಶೇ 32.7, ಅವರ ಪತ್ನಿ ಮಾಳವಿಕಾ ಹೆಗ್ಡೆ ಶೇ 4.05 ಮತ್ತು ಇತರ ನಾಲ್ಕು ಪ್ರವರ್ತಕ ಸಂಸ್ಥೆಗಳು ಶೇ 17ರಷ್ಟು ಪಾಲು ಬಂಡವಾಳ ಹೊಂದಿವೆ. ಇವುಗಳ ಒಟ್ಟಾರೆ ಪಾಲು ಶೇ 53.93ರಷ್ಟಾಗುತ್ತದೆ. ಪ್ರವರ್ತಕರ ಪಾಲಿನ ಈ ಪಾಲು ಬಂಡವಾಳದ ಶೇ 75.7ರಷ್ಟು (8.62 ಕೋಟಿ) ಷೇರುಗಳನ್ನು ಅಡಮಾನ ಇರಿಸಿ ಸಾಲ ಪಡೆಯಲಾಗಿದೆ. ಜೂನ್‌ ತಿಂಗಳಿನಲ್ಲಿಯೂ ಸಿದ್ಧಾರ್ಥ ಅವರು ಶೇ 1.39ರಷ್ಟು (29.2 ಲಕ್ಷ) ಷೇರುಗಳನ್ನು ಅಡಮಾನ ಇರಿಸಿ ಸಾಲ ಪಡೆದಿದ್ದಾರೆ.

ಸಂಸ್ಥೆಯು ಈ ವರ್ಷದ ಮೊದಲ ತ್ರೈಮಾಸಿಕದ ಹಣಕಾಸು ಸಾಧನೆಯನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ಷೇರು ಕುಸಿತ: ಕರಗಿದ ₹1,723 ಕೋಟಿ
ಕಾಫಿ ಡೇ ಎಂಟರ್‌ಪ್ರೈಸಸ್‌ನ ಷೇರು ಬೆಲೆ ಸತತ ಮೂರನೇ ದಿನವೂ ಕುಸಿತ ಕಂಡಿದೆ.

ಕಂಪನಿಗೆ ಸಂಬಂಧಿಸಿದ ಹಲವಾರು ನಕಾರಾತ್ಮಕ ಸುದ್ದಿಗಳಿಂದಾಗಿ ಷೇರು ಬೆಲೆ ಮೂರು ದಿನಗಳಿಂದ ಕುಸಿಯುತ್ತಲೇ ಇದೆ. ಗುರುವಾರದ ವಹಿವಾಟಿನಲ್ಲಿ ಪ್ರತಿ ಷೇರಿನ ಬೆಲೆ ಶೇ 10ರಷ್ಟು ಕಡಿಮೆಯಾಗಿ ₹ 110.95ಕ್ಕೆ ಇಳಿದಿದೆ. ಇದು 52 ವಾರಗಳಲ್ಲಿಯ ಅತಿ ಕಡಿಮೆ ಮಟ್ಟವಾಗಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿಯೂ ₹ 110.50ಕ್ಕೆ ಕುಸಿದಿದೆ.

ಮೂರು ದಿನಗಳಲ್ಲಿ ಷೇರಿನ ಬೆಲೆಯು ಶೇ 42ರಷ್ಟು ಕುಸಿತ ಕಂಡಿದೆ. ಇದರಿಂದ ಮಾರುಕಟ್ಟೆ ಮೌ‌ಲ್ಯದ ಲೆಕ್ಕದಲ್ಲಿ ಸಂಸ್ಥೆಯ ಸಂಪತ್ತು ₹ 1,723 ಕೋಟಿಗಳಷ್ಟು ಕರಗಿದೆ. ಸದ್ಯಕ್ಕೆ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ₹ 2,343.84 ಕೋಟಿಗಳಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.