ನವದೆಹಲಿ: ಮುಂದಿನ ಆರು ತಿಂಗಳಲ್ಲಿ ಸಿಮೆಂಟ್ ಬೆಲೆ ಶೇ 10ರಷ್ಟು ಏರಿಕೆಯಾಗಲಿದೆ ಎಂದು ಸಿಮೆಂಟ್ ತಯಾರಕರ ಸಂಘ (ಸಿಎಂಎ) ತಿಳಿಸಿದೆ.
‘ಇಂಧನ ಬೆಲೆ ಹೆಚ್ಚಳ ಮತ್ತು ಸಾರಿಗೆ ವೆಚ್ಚ ಸರಿದೂಗಿಸಲು ಬೆಲೆ ಏರಿಕೆ ಅನಿವಾರ್ಯವಾಗಲಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸಿಮೆಂಟ್ ತಯಾರಿಕಾ ಉದ್ದಿಮೆಯು ಶೇ 14ರಷ್ಟು ವೃದ್ಧಿ ದಾಖಲಿಸಿದೆ. 2009–10ರ ನಂತರ ಇದೇ ಮೊದಲ ಬಾರಿಗೆ ಎರಡಂಕಿ ವೃದ್ಧಿ ಕಂಡು ಬಂದಿದೆ. ಆರೇಳು ವರ್ಷಗಳಿಂದ ಸ್ಥಿರಗೊಂಡಿದ್ದ ಬೆಲೆ ಹೆಚ್ಚಿಸಲು ಇದು ಅವಕಾಶ ಕಲ್ಪಿಸಿದೆ’ ಎಂದು ‘ಸಿಎಂಎ’ ಅಧ್ಯಕ್ಷ ಶೈಲೇಂದ್ರ ಚೌಕ್ಸೆ ಹೇಳಿದ್ದಾರೆ.
ಬ್ಯಾಂಕ್ ಸಾಲ ನೀಡಿಕೆ ಹೆಚ್ಚಳ
ಮುಂಬೈ (ಪಿಟಿಐ): ಸೆಪ್ಟೆಂಬರ್ ತಿಂಗಳಾಂತ್ಯಕಿಕಾ ಬ್ಯಾಂಕ್ ಸಾಲ ನೀಡಿಕೆಯು ₹ 89.82 ಲಕ್ಷ ಕೋಟಿಗಳಿಗೆ ತಲುಪಿದ್ದು ಶೇ 12.51ರಷ್ಟು ಏರಿಕೆ ದಾಖಲಿಸಿದೆ.
ಇದೇ ಸಂದರ್ಭದಲ್ಲಿ ಠೇವಣಿ ಮೊತ್ತ ಶೇ 8.07ರಷ್ಟು ಹೆಚ್ಚಳ ಸಾಧಿಸಿ ₹ 118 ಲಕ್ಷ ಕೋಟಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಸಾಲದ ಪ್ರಮಾಣ ₹ 79.83 ಲಕ್ಷ ಕೋಟಿ ಮತ್ತು ಠೇವಣಿ ಮೊತ್ತ ₹ 109 ಲಕ್ಷ ಕೋಟಿಗಳಷ್ಟಿತ್ತು.
ಫುಡ್‌ಪಾಂಡಾ ಜಾಲ ವಿಸ್ತರಣೆ
ಬೆಂಗಳೂರು: ಗ್ರಾಹಕರ ಮನೆ ಬಾಗಿಲಿಗೆ ಆಹಾರ ವಿತರಿಸುವ ಫುಡ್‌ಪಾಂಡಾದ ಜಾಲದಲ್ಲಿ 1.25 ಲಕ್ಷ ವಿತರಕರು ಕೆಲಸ ಮಾಡುತ್ತಿದ್ದು, ದೇಶದ ಅತಿದೊಡ್ಡ ಜಾಲವಾಗಿ ಬೆಳೆದಿದೆ.
ಆಹಾರ ವಿತರಿಸುವ ಸಿಬ್ಬಂದಿ ಸಂಸ್ಥೆಯ ರೆಸ್ಟೋರೆಂಟ್ ಪಾಲುದಾರರಿಂದ ಗ್ರಾಹಕರಿಗೆ ಸಕಾಲದಲ್ಲಿ ಆಹಾರ ವಿತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
‘ಇವರ ಸಂಖ್ಯೆಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಗುರಿ ನಿಗದಿಪಡಿಸಲಾಗಿದೆ’ ಎಂದು ಸಂಸ್ಥೆಯ ಸಿಇಒ ಪ್ರಣಯ್ ಜೆ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.