ಬೆಂಗಳೂರು: ‘ಕಳೆದ ಎರಡು–ಮೂರು ವರ್ಷಗಳಿಂದ ಇಡೀ ದೇಶದಲ್ಲಿಯೇ ವಿದೇಶಿ ನೇರ ಬಂಡವಾಳ ಹೂಡಿಕೆಯ (ಎಫ್‌ಡಿಐ) ಒಳಹರಿವು ಕಡಿಮೆಯಾಗಿದೆ. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿ–ಅಂಶಗಳೇ ಇದರ ವಾಸ್ತವ ಚಿತ್ರಣ ನೀಡುತ್ತವೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಕರ್ನಾಟಕದಲ್ಲಿ ಮಾತ್ರ ಎಫ್‌ಡಿಐ ಒಳಹರಿವು ಕಡಿಮೆಯಾಗಿಲ್ಲ. ಕೇಂದ್ರದ ದೂರದೃಷ್ಟಿ ಇಲ್ಲದ ಹಾಗೂ ದೋಷಪೂರಿತ ನೀತಿಗಳೇ ಕುಸಿತಕ್ಕೆ ಕಾರಣವಾಗಿವೆ. ಜೊತೆಗೆ, ಜಾಗತಿಕ ವಿದ್ಯಮಾನಗಳು ಕೂಡ ಕಾರಣವಾಗಿರಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಎಫ್‌ಡಿಐ ಒಳಹರಿವು ನಿರಂತರವಾಗಿ ಕುಸಿಯುತ್ತಿದೆ. 2020-21ರಲ್ಲಿ ₹4.42 ಲಕ್ಷ ಕೋಟಿ, 2021-22ರಲ್ಲಿ ₹4.37 ಲಕ್ಷ ಕೋಟಿ, 2022-23ರಲ್ಲಿ ₹3.67 ಲಕ್ಷ ಕೋಟಿ ಮತ್ತು 2023-24ರಲ್ಲಿ ₹ 3.47 ಲಕ್ಷ ಕೋಟಿಗೆ ಇಳಿದಿದೆ ಎಂದು ಹೇಳಿದ್ದಾರೆ.
2022-23ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಶೇ 3ರಷ್ಟು ಇಳಿಕೆಯಾಗಿದೆ. ಆದರೆ, ಅದಕ್ಕೂ ಮುಂಚಿನ ನಾಲ್ಕು ವರ್ಷಗಳಲ್ಲಿ ಇಳಿಕೆ ಪ್ರಮಾಣವು ಶೇ 25ಕ್ಕಿಂತಲೂ ಹೆಚ್ಚಿದೆ ಎಂದು ಹೇಳಿದ್ದಾರೆ.
‘ಎಫ್‌ಡಿಐ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿದ್ದ ಕರ್ನಾಟಕವು ಈಗ ಮೂರನೇ ಸ್ಥಾನಕ್ಕೆ ಇಳಿಯಲು ಕೇಂದ್ರದ ಧೋರಣೆ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಉದಾಸೀನ ನಿಲುವು ಕಾರಣಗಳಾಗಿವೆ. ವಿದೇಶಿ ಹೂಡಿಕೆದಾರರು ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ಒತ್ತಾಸೆ ಮೇರೆಗೆ ಮಹಾರಾಷ್ಟ್ರ ಮತ್ತು ಗುಜರಾತ್‌ನತ್ತ ಮುಖ ಮಾಡಿದ್ದಾರೆ ಎಂದು ದೂರಿದ್ದಾರೆ.
‘ರಾಜ್ಯದಲ್ಲಿ 2023-24ರಲ್ಲಿ ಒಳಹರಿವು ಕಡಿಮೆ ಆಗಿದೆ. ಈ ಪರಿಸ್ಥಿತಿ ಸುಧಾರಿಸಲು ಕಾಂಗ್ರೆಸ್ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದೆ. ಕಂಪನಿಗಳ ಹೂಡಿಕೆಗೆ ಸೂಕ್ತ ಭೂಮಿಕೆ ಸಿದ್ಧಪಡಿಸಲು ಸರ್ವ ಪ್ರಯತ್ನ ಮಾಡುತ್ತಿದೆ’ ಎಂದು ಹೇಳಿದ್ದಾರೆ.
₹1.13 ಲಕ್ಷ ಕೋಟಿ ಹೂಡಿಕೆ ಆಕರ್ಷಣೆ
‘2023-24ನೇ ಆರ್ಥಿಕ ವರ್ಷದಲ್ಲಿ ದೇಶೀಯ ಹಾಗೂ ವಿದೇಶಿ ಕಂಪನಿಗಳಿಂದ ರಾಜ್ಯ ಸರ್ಕಾರವು ₹1.13 ಲಕ್ಷ ಕೋಟಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ತಿಳಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ), ವಿದ್ಯುತ್ ಚಾಲಿತ ವಾಹನಗಳ ಲಿ–ಅಯಾನ್ ಬ್ಯಾಟರಿ ತಯಾರಿಕೆ, ಉಕ್ಕು ತಯಾರಿಕೆ, ದತ್ತಾಂಶ ಕೇಂದ್ರಗಳ ಸ್ಥಾಪನೆ ಸೇರಿ ಹಲವಾರು ಕ್ಷೇತ್ರಗಳಲ್ಲಿ ಈ ಹೂಡಿಕೆಗೆ ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.