ADVERTISEMENT

PMMY: ಮುದ್ರಾ ಯೋಜನೆಯಡಿ ಸಾಲ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (PMMY) ನೀಡುವ ಸಾಲದ ಮಿತಿಯನ್ನು ₹ 20 ಲಕ್ಷಕ್ಕೆ ಹೆಚ್ಚಿಸಿದೆ.

ಪಿಟಿಐ
Published 25 ಅಕ್ಟೋಬರ್ 2024, 11:31 IST
Last Updated 25 ಅಕ್ಟೋಬರ್ 2024, 11:31 IST
<div class="paragraphs"><p>MUDRA Loan</p></div>

MUDRA Loan

   

ನವದೆಹಲಿ: ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (PMMY) ನೀಡುವ ಸಾಲದ ಮಿತಿಯನ್ನು ₹ 20 ಲಕ್ಷಕ್ಕೆ ಹೆಚ್ಚಿಸಿದೆ. ದೇಶದಾದ್ಯಂತ ಉದ್ಯಮಶೀಲತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.

‘ಕಾರ್ಪೊರೇಟ್‌ ಅಲ್ಲದ ಕೃಷಿಯೇತರ ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಯೋಜನೆಯ ಆಶಯವನ್ನು ಮತ್ತಷ್ಟು ವಿಸ್ತರಿಸಲು ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯವು ಶುಕ್ರವಾರ ತಿಳಿಸಿದೆ.

ADVERTISEMENT

ಜುಲೈನಲ್ಲಿ ಮಂಡನೆಯಾಗಿದ್ದ 2024–25ನೇ ಸಾಲಿನ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಸಾಲದ ಮಿತಿ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ತರುಣ್‌ ವಿಭಾಗದಲ್ಲಿ ₹10 ಲಕ್ಷ ಸಾಲ ಪಡೆದಿದ್ದು, ಸಕಾಲದಲ್ಲಿ ಮರುಪಾವತಿ ಮಾಡಿದವರಿಗಷ್ಟೇ ಈ ಸೌಲಭ್ಯ ಸಿಗಲಿದೆ.

‘ತರುಣ್‌ ಪ್ಲಸ್‌ ವಿಭಾಗದಲ್ಲಿ ₹10 ಲಕ್ಷದಿಂದ ₹20 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

2015ರ ಏಪ್ರಿಲ್‌ 8ರಂದು ಪಿಎಂಎಂವೈ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಸರ್ಕಾರಿ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಕಿರು ಹಣಕಾಸು ಸಂಸ್ಥೆಗಳ ಮೂಲಕ ಅರ್ಹರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ.

ಯಾವುದೇ, ಆಧಾರ ಇಲ್ಲದೆ ಸಾಲ ಸೌಲಭ್ಯ ಸಿಗಲಿದೆ. ಶಿಶು (₹50 ಸಾವಿರದವರೆಗೆ), ಕಿಶೋರ್‌ (₹50 ಸಾವಿರದಿಂದ ₹5 ಲಕ್ಷ) ಹಾಗೂ ತರುಣ್‌ (₹10 ಲಕ್ಷ) ವಿಭಾಗದಲ್ಲಿ ಸಾಲ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.