ನವದೆಹಲಿ: ಭಾರತ್ ಬ್ರ್ಯಾಂಡ್‌ನಡಿ ರಿಯಾಯಿತಿ ದರದಲ್ಲಿ ಕಡಲೆಕಾಳು ಮತ್ತು ಚೆನ್ನಂಗಿ ಬೇಳೆ (ಮಸೂರ್ ದಾಲ್) ಮಾರಾಟಕ್ಕೆ ಕೇಂದ್ರ ಸರ್ಕಾರ, ಬುಧವಾರ ಚಾಲನೆ ನೀಡಿದೆ.
ಪ್ರತಿ ಕೆ.ಜಿ ಕಡಲೆಕಾಳಿಗೆ ₹58 ಹಾಗೂ ಚೆನ್ನಂಗಿ ಬೇಳೆಗೆ ₹89 ದರ ನಿಗದಿಪಡಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಏರಿಕೆಯಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಾರಾಟಕ್ಕೆ ಕ್ರಮವಹಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.
ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಹಾಗೂ ಕೇಂದ್ರೀಯ ಭಂಡಾರಗಳ ಮೂಲಕ ಮಾರಾಟ ಮಾಡಲಿದೆ.
ಮಾರಾಟಕ್ಕೆ ಚಾಲನೆ ನೀಡಿದ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ, ‘ಬೆಲೆ ಸ್ಥಿರತೆ ನಿಧಿಯಡಿ (ಪಿಎಸ್ಎಫ್) ಕಡಲೆಕಾಳು ಮತ್ತು ಚೆನ್ನಂಗಿ ಬೇಳೆಯನ್ನು ಕಾಪು ದಾಸ್ತಾನು ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸಲು ಈ ಉತ್ಪನ್ನಗಳ ಮಾರಾಟಕ್ಕೆ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
‘ದೇಶದಲ್ಲಿ ಪ್ರಸಕ್ತ ವರ್ಷದಲ್ಲಿ ಬೇಳೆಕಾಳುಗಳ ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆಯಿದೆ. ಸರ್ಕಾರವು ಬೆಂಬಲ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ’ ಎಂದರು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಭಾರತ್ ಬ್ರ್ಯಾಂಡ್‌ನಡಿ ಮೊದಲ ಹಂತದಲ್ಲಿ ಅಕ್ಕಿ, ಗೋಧಿ ಹಿಟ್ಟು, ಕಡಲೆಬೇಳೆ, ಹೆಸರುಬೇಳೆ ಮತ್ತು ಹೆಸರು ಕಾಳು ಮಾರಾಟಕ್ಕೆ ಚಾಲನೆ ನೀಡಿತ್ತು.
ನೋಡಲ್ ಏಜೆನ್ಸಿಗಳಿಗೆ ಕೇಂದ್ರ ಸರ್ಕಾರವು 3 ಲಕ್ಷ ಟನ್ ಕಡಲೆಬೇಳೆ ಮತ್ತು 68 ಸಾವಿರ ಟನ್ ಹೆಸರು ಕಾಳನ್ನು ಹಂಚಿಕೆ ಮಾಡಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಮತ್ತು ಈರುಳ್ಳಿ ದರ ಏರಿಕೆಯಾಗಿದ್ದು, ಕೇಂದ್ರ ಮಧ್ಯಪ್ರವೇಶಿಸಿದೆ. ರಿಯಾಯಿತಿ ದರದಡಿ ಕೆ.ಜಿ ಈರುಳ್ಳಿಗೆ ₹35 ಹಾಗೂ ಟೊಮೆಟೊಗೆ ₹65 ನಿಗದಿಪಡಿಸಿ ಮಾರಾಟ ಮಾಡುತ್ತಿದೆ.
ಎನ್‌ಸಿಸಿಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಅನಿಸ್ ಚಂದ್ರ ಜೋಸೆಫ್ ಮಾತನಾಡಿ ‘ಆರಂಭಿಕ ಹಂತದಲ್ಲಿ ದೆಹಲಿ ರಾಜಸ್ಥಾನ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಕಡಲೆಕಾಳು ಮತ್ತು ಚೆನ್ನಂಗಿಬೇಳೆ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಇನ್ನು 10 ದಿನದಲ್ಲಿ ದೇಶದಾದ್ಯಂತ ಮಾರಾಟಕ್ಕೆ ಚಾಲನೆ ದೊರೆಯಲಿದೆ’ ಎಂದು ವಿವರಿಸಿದರು. ‘ಕಡಲೆಕಾಳಿಗೆ ಉತ್ತಮ ಬೇಡಿಕೆ ಇದೆ. ಹಾಗಾಗಿ ರಿಯಾಯಿತಿ ದರದಡಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಇ–ಕಾಮರ್ಸ್ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಪದಾರ್ಥಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ ಮಾತುಕತೆ ನಡೆದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.