ADVERTISEMENT

ಮಿಲ್ಲಿಂಗ್‌ ಕೊಬ್ಬರಿ ಖರೀದಿಗೆ ಒಪ್ಪಿಗೆ; 2,999 ಟನ್‌ ಖರೀದಿಗೆ ಮಿತಿ ನಿಗದಿ

ಕ್ವಿಂಟಲ್‌ಗೆ ₹11,160 ಬೆಂಬಲ ಬೆಲೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 11:07 IST
Last Updated 7 ಮಾರ್ಚ್ 2024, 11:07 IST
ಮಿಲ್ಲಿಂಗ್ ಕೊಬ್ಬರಿ
ಮಿಲ್ಲಿಂಗ್ ಕೊಬ್ಬರಿ   

ಬೆಂಗಳೂರು: ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ (ಎಂಎಸ್‌ಪಿ) ಮಿಲ್ಲಿಂಗ್ ಕೊಬ್ಬರಿ (ಚಿಕ್ಕ ಚಿಕ್ಕ ತುಂಡು) ಖರೀದಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿದೆ.

ಪ್ರಸಕ್ತ ಋತುವಿನಡಿ ರಾಜ್ಯದಲ್ಲಿ ಮಿಲ್ಲಿಂಗ್ ಕೊಬ್ಬರಿಯ ಇಳುವರಿ 11,995 ಟನ್ ಆಗಿದೆ. ಈ ಪೈಕಿ 2,999 ಟನ್ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ಕರಾವಳಿ ಭಾಗದಲ್ಲಿ ಈ ಕೊಬ್ಬರಿ ಉತ್ಪಾದನೆಯು ಹೆಚ್ಚಿದ್ದು, ಎಣ್ಣೆ ತಯಾರಿಕೆಗೆ ಹೆಚ್ಚಾಗಿ ಬಳಕೆಯಾಗುತ್ತದೆ. ಪ್ರತಿ ಕ್ವಿಂಟಲ್‌ಗೆ ₹11,160 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.  

‘ರಾಜ್ಯ ಸರ್ಕಾರ ಸತತವಾಗಿ ಕೇಂದ್ರದ ಜೊತೆ ಪತ್ರ ವ್ಯವಹಾರ ನಡೆಸಿ ಒತ್ತಡ ಹೇರಿತ್ತು. ಈ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಇದೇ ಪ್ರಥಮ ಬಾರಿಗೆ ಮಿಲ್ಲಿಂಗ್ ಕೊಬ್ಬರಿ ಖರೀದಿಸಲು ಅನುಮತಿ ದೊರೆತಿದೆ. ವಿವಿಧ ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಸಲಾಗುತ್ತದೆ’ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ.

ADVERTISEMENT

ಕೇಂದ್ರವು ರಾಜ್ಯದಲ್ಲಿನ ಇಳುವರಿ ಅಂದಾಜಿನ ಶೇ 25ರಷ್ಟು ಕೊಬ್ಬರಿಯನ್ನು ಖರೀದಿಸುತ್ತದೆ. ಶೀಘ್ರವೇ, ಖರೀದಿ ನೋಂದಣಿ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಉಂಡೆ ಕೊಬ್ಬರಿ ಉತ್ಪಾದನೆಯು 25 ಲಕ್ಷ ಕ್ವಿಂಟಲ್‌ (2.5 ಲಕ್ಷ ಟನ್) ಇದೆ. ಈ ಮೊದಲು 6.25 ಲಕ್ಷ ಕ್ವಿಂಟಲ್ (62,500 ಟನ್) ಕೊಬ್ಬರಿ ಖರೀದಿಗೆ ಕೇಂದ್ರ ಅನುಮತಿ ನೀಡಿತ್ತು.

ಆದರೆ, ರಾಜ್ಯದಲ್ಲಿ ಇಳುವರಿ ಪ್ರಮಾಣ ಹೆಚ್ಚಿದೆ. ಹಾಗಾಗಿ, ನಿಗದಿಪಡಿಸಿರುವ ಖರೀದಿ ಪ್ರಮಾಣವನ್ನು ದ್ವಿಗುಣಗೊಳಿಸುವಂತೆ ಒತ್ತಡ ಹೇರಲಾಗಿತ್ತು. ಕೇಂದ್ರವು ಹೆಚ್ಚುವರಿಯಾಗಿ 6,750 ಟನ್ ಖರೀದಿಗೆ ಅನುಮತಿ ನೀಡಿತ್ತು ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.