ನವದೆಹಲಿ: ಫಸಲಿನ ಮೇಲೆ ದಾಳಿ ನಡೆಸುವ ಕೀಟಗಳ ಬಗ್ಗೆ ಮಾಹಿತಿ ಸಂಗ್ರಹದ ಜೊತೆಗೆ, ಅವುಗಳ ಹಾವಳಿ ನಿಯಂತ್ರಣಕ್ಕೆ ರೈತರಿಗೆ ನೆರವಾಗಲು ಕೇಂದ್ರ ಸರ್ಕಾರವು, ರಾಷ್ಟ್ರೀಯ ಕೀಟ ಕಣ್ಗಾವಲು ವ್ಯವಸ್ಥೆಯಡಿ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ರೈತರು ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ತಮ್ಮ ಜಮೀನಿನ ಬೆಳೆಗಳಿಗೆ ಕಾಡುವ ಕೀಟಗಳ ಫೋಟೊ ತೆಗೆದು ಇದರಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಇದರಿಂದ ಕೀಟಗಳ ದಾಳಿ ಬಗ್ಗೆ ತ್ವರಿತವಾಗಿ ಮಾಹಿತಿ ಸಂಗ್ರಹಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ. ಜೊತೆಗೆ, ಅವುಗಳ ನಿಯಂತ್ರಣಕ್ಕೆ ಅಗತ್ಯವಿರುವ ತುರ್ತು ಕ್ರಮಗೊಳ್ಳಲು ಸಹಕಾರಿಯಾಗಲಿದೆ. ಸ್ಥಳೀಯವಾಗಿ ಅಥವಾ ಜಿಲ್ಲಾ, ರಾಜ್ಯಮಟ್ಟದಲ್ಲಿ ಅವುಗಳ ಹಾವಳಿ ವ್ಯಾಪಿಸುವ ಬಗ್ಗೆ ಅರಿಯಲು ಕೃಷಿ ಅಧಿಕಾರಿಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.
ಸಕಾಲದಲ್ಲಿ ಇವುಗಳ ಹಾವಳಿ ನಿಯಂತ್ರಿಸುವ ಮೂಲಕ ಬೆಳೆ ರಕ್ಷಿಸಲು ನೆರವಾಗಲಿದೆ. ಅಲ್ಲದೆ, ಅವುಗಳ ನಿಯಂತ್ರಣದ ಬಗ್ಗೆ ರೈತರಿಗೆ ಅಗತ್ಯ ಕೀಟನಾಶಕಗಳ ಬಳಕೆ ಬಗ್ಗೆಯೂ ಆ್ಯಪ್ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.