ADVERTISEMENT

ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿ ಮಾರುಕಟ್ಟೆಗೆ

ಪಿಟಿಐ
Published 21 ಫೆಬ್ರುವರಿ 2023, 15:39 IST
Last Updated 21 ಫೆಬ್ರುವರಿ 2023, 15:39 IST
   

ನವದೆಹಲಿ (ಪಿಟಿಐ): ಗೋಧಿ ಹಾಗೂ ಗೋಧಿ ಹಿಟ್ಟಿನ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಕೇಂದ್ರವು ತನ್ನ ಸಂಗ್ರಹದಿಂದ 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಜನವರಿ 25ರಂದು ಹೇಳಿತ್ತು. ಈಗ ಇದಕ್ಕೆ ಹೆಚ್ಚುವರಿಯಾಗಿ ಕೇಂದ್ರ ಆಹಾರ ನಿಗಮವು 20 ಲಕ್ಷ ಟನ್ ಗೋಧಿಯನ್ನು ಗಿರಣಿಗಳಿಗೆ, ವರ್ತಕರಿಗೆ ಹಾಗೂ ಗೋಧಿಯ ಉತ್ಪನ್ನಗಳನ್ನು ಸಿದ್ಧಪಡಿಸುವವರಿಗೆ ಮಾರಾಟ ಮಾಡಲಿದೆ.

‘ಇದುವರೆಗೆ ಒಟ್ಟು 50 ಲಕ್ಷ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ. ಮೀಸಲು ಬೆಲೆ ಇಳಿಕೆ ಹಾಗೂ ಹೆಚ್ಚುವರಿಯಾಗಿ ಗೋಧಿಯನ್ನು ಬಿಡುಗಡೆ ಮಾಡುವುದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿಯ ಉತ್ಪನ್ನಗಳ ಬೆಲೆಯು ತಗ್ಗಲಿದೆ’ ಎಂದು ಕೇಂದ್ರದ ಹೇಳಿಕೆ ತಿಳಿಸಿದೆ.

ADVERTISEMENT

ಗೋಧಿಯ ಮಾರುಕಟ್ಟೆ ಬೆಲೆ ತಗ್ಗಿದಂತೆಲ್ಲ, ಗೋಧಿ ಹಿಟ್ಟು ಹಾಗೂ ಗೋಧಿಯ ಉತ್ಪನ್ನಗಳ ಬೆಲೆಯನ್ನು ತಗ್ಗಿಸುವಂತೆ ಗಿರಣಿಗಳಿಗೆ ಸಲಹೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಸರ್ಕಾರದ ಅಂಕಿ–ಅಂಶದ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ ಗೋಧಿಯ ಸರಾಸರಿ ಬೆಲೆಯು ಕೆ.ಜಿ.ಗೆ ₹ 33.15ರಷ್ಟಿದೆ, ಗೋಧಿ ಹಿಟ್ಟಿನ ಸರಾಸರಿ ಬೆಲೆಯು ₹ 37.63ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.