ನವದೆಹಲಿ: ದೇಶದಾದ್ಯಂತ ರಾಜ್ಯ ಹಾಗೂ ಜಿಲ್ಲಾ ಗ್ರಾಹಕರ ಆಯೋಗಗಳಲ್ಲಿ 663 ಹುದ್ದೆಗಳು ಖಾಲಿ ಉಳಿದಿದ್ದು, ಗ್ರಾಹಕರ ಹಕ್ಕುಗಳ ರಕ್ಷಣೆಗೆ ತೊಂದರೆಯಾಗಿದೆ ಎಂದು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ತ್ವರಿತವಾಗಿ ಈ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು ಎಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ಗ್ರಾಹಕರ ಆಯೋಗಗಳ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಅವರು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವಾಲಯದ ಮಾಹಿತಿ ಪ್ರಕಾರ ಅಕ್ಟೋಬರ್ ಅಂತ್ಯಕ್ಕೆ ರಾಜ್ಯ ಆಯೋಗಗಳಲ್ಲಿ 18 ಅಧ್ಯಕ್ಷರು ಹಾಗೂ 56 ಸದಸ್ಯರ ಹುದ್ದೆಗಳು ಖಾಲಿ ಉಳಿದಿವೆ. ಜಿಲ್ಲಾಮಟ್ಟದಲ್ಲಿ 162 ಅಧ್ಯಕ್ಷರು ಹಾಗೂ 427 ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಿಲ್ಲ ಎಂದು ತಿಳಿಸಿದೆ.
ಗ್ರಾಹಕರ ವ್ಯಾಜ್ಯಗಳು/ ದೂರುಗಳನ್ನು ಪರಿಣಾಮಕಾರಿಯಾಗಿ ಇತ್ಯರ್ಥಪಡಿಸುವ ಸಂಬಂಧ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ ಎಂದು ನಿಧಿ ಖರೆ ಸೂಚಿಸಿದ್ದಾರೆ.
ರಾಜ್ಯಗಳು ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕು. ಆ ಮೂಲಕ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಆಯೋಗಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಕರಿಸಬೇಕು ಎಂದು ಹೇಳಿದ್ದಾರೆ.
ಗ್ರಾಹಕ ರಕ್ಷಣೆ ಕಾಯ್ದೆ 2019ರ ಸೆಕ್ಷನ್ 32ರ ಅನ್ವಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಹುದ್ದೆ ಖಾಲಿ ಇದ್ದರೆ, ಇತರೆ ಜಿಲ್ಲೆಯ ಅಧ್ಯಕ್ಷರಿಗೆ ಈ ಹುದ್ದೆಯ ಹೆಚ್ಚುವರಿ ಜವಾಬ್ದಾರಿ ನೀಡಬೇಕಿದೆ. ಇದರಿಂದ ವ್ಯಾಜ್ಯಗಳ ಪರಿಹಾರದಲ್ಲಿನ ವಿಳಂಬ ತಡೆಯಲು ನೆರವಾಗಲಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಮಟ್ಟದ ಅಧಿಕಾರಿಗಳು ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಕೇಂದ್ರಕ್ಕೆ ತಿಳಿಸಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.