ನವದೆಹಲಿ: ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023–24ರ ಏಪ್ರಿಲ್–ಆಗಸ್ಟ್ ಅವಧಿಯಲ್ಲಿ ವಾರ್ಷಿಕ ಬಜೆಟ್ ಅಂದಾಜಿನ ಶೇ 36ರಷ್ಟು ಆಗಿದೆ.
2022–23ರ ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇ 32.6ರಷ್ಟು ಇತ್ತು ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
ಮೌಲ್ಯದ ಲೆಕ್ಕದಲ್ಲಿ ವಿತ್ತೀಯ ಕೊರತೆಯು ಆಗಸ್ಟ್ ತಿಂಗಳ ಅಂತ್ಯಕ್ಕೆ ₹6.42 ಲಕ್ಷ ಕೋಟಿಯಷ್ಟು ಆಗಿದೆ. ವರಮಾನ ಮತ್ತು ವೆಚ್ಚದ ನಡುವಣ ಅಂತರವೇ ವಿತ್ತೀಯ ಕೊರತೆ.
2023–24ನೇ ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆಯನ್ನು ಶೇ 5.9ಕ್ಕೆ ತಗ್ಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. 2022–23ರಲ್ಲಿ ವಿತ್ತೀಯ ಕೊರತೆಯು ಶೇ 6.4ರಷ್ಟು ಇತ್ತು.
ನಿವ್ವಳ ತೆರಿಗೆ ವರಮಾನವು 2023–24ರ ಏಪ್ರಿಲ್–ಆಗಸ್ಟ್ ಅವಧಿಗೆ ₹8.03 ಲಕ್ಷ ಕೋಟಿ ಆಗಿದೆ. ಬಜೆಟ್ ಅಂದಾಜಿನ ಶೇ 34.5ರಷ್ಟು. 2022–23ರ ಆಗಸ್ಟ್ ಅಂತ್ಯದಲ್ಲಿ ಶೇ 36.2ರಷ್ಟು ಆಗಿತ್ತು.
ಕೇಂದ್ರದ ಒಟ್ಟು ವೆಚ್ಚವು ಬಜೆಟ್ ಅಂದಾಜಿನ ಶೇ 37.1ರಷ್ಟು (₹16.71 ಲಕ್ಷ ಕೋಟಿ) ಆಗಿದೆ. ಹಿಂದಿನ ಅವಧಿಯಲ್ಲಿ ಶೇ 35.2ರಷ್ಟು ಇತ್ತು ಎಂದು ಸಿಜಿಎ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.