ಸುದ್ದಿಯಲ್ಲಿರುವ ಕಾರಣ ?
→ಸಿಮೆಂಟ್ ಕಾರ್ಖಾನೆಗಳು ಹೆಚ್ಚಾಗಿ ಕಾರ್ಯನಿರ್ವಹಿಸಲು ಪ್ರಾರಂಭವಾದ ಕಾರಣದಿಂದ ಕೇಸರಿ ಉತ್ಪಾದನೆಗೆ ಪ್ರಖ್ಯಾತಿಯನ್ನು ಹೊಂದಿದ್ದ ಕಾಶ್ಮೀರದಲ್ಲಿ ಉತ್ಪಾದನೆ ದಿನದಿಂದ ದಿನಕ್ಕೆ ತಗ್ಗುತ್ತಿದೆ ಎನ್ನುವ ವರದಿ ಬಹಿರಂಗವಾಗಿದೆ.
→ಇರಾನ್ ನಂತರ ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಕೇಸರಿ ಉತ್ಪಾದನೆ ಮಾಡುತ್ತಿರುವುದು ಕಾಶ್ಮೀರ. ಪ್ರತಿ ವರ್ಷ 11 ರಿಂದ 12 ಟನ್ ಕೇಸರಿ ಉತ್ಪಾದನೆಯನ್ನು ಮಾಡುತ್ತಿತ್ತು.
ಕೇಸರಿ ಉತ್ಪಾದನೆ ಇಳಿಮುಖಕ್ಕೆ ಕಾರಣಗಳು
→ಕೇಸರಿ ಬೆಳೆಯುವ ಹೊಲಗಳಿಗೆ ಸಮೀಪದಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಂದ ಹೆಚ್ಚಿನ ಪ್ರಮಾಣದ ದೂಳು ಹೊರಸೂಸುತ್ತಿರುವ ಕಾರಣದಿಂದ ಕೇಸರಿಯ ಇಳುವರಿ, ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುತ್ತಿದೆ.
→ ಸಿಮೆಂಟ್ ಕಾರ್ಖಾನೆಗಳ ಮಾಲಿನ್ಯದ ಕಾರಣದಿಂದ ಪುಲ್ವಾಮದ ಕೇಸರಿ ಹೊಲಗಳ ಇಳುವರಿಯಲ್ಲಿ
ಶೇ 60 ರಷ್ಟು ಕುಸಿತ ಕಂಡಿದೆ.
ಸಿಮೆಂಟ್ ದೂಳಿನ ಪರಿಣಾಮ
ಕೇಸರಿ ಹೂವುಗಳು ಅತ್ಯಂತ ಸೂಕ್ಷ್ಮವಾಗಿದ್ದು ಸಿಮೆಂಟ್ ದೂಳಿನಲ್ಲಿರುವ ಹಾನಿಕಾರಕ ಕಣಗಳಾದ ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಕಾರ್ಬನ್ ಮೊನಾಕ್ಸೈಡ್ ಅಂಶಗಳು ಹಾನಿ ಉಂಟು ಮಾಡುತ್ತಿವೆ.
→ಕಾರ್ಖಾನೆಗಳಿಂದ ಉಂಟಾಗುವ ದೂಳು ಕೇಸರಿ ಎಲೆಗಳ ಮತ್ತು ಹೂವುಗಳ ಸಣ್ಣ ರಂಧ್ರಗಳನ್ನು ಹೊಕ್ಕಿ ಪ್ರಾಥಮಿಕ ಹಂತದಲ್ಲಿಯೇ ಎಲೆ ಉದುರುತ್ತಿದೆ. ಇದರಿಂದ ಕೇಸರಿ ಬೆಳೆಯ ಇಳುವರಿ ಕುಸಿತಗೊಂಡಿದೆ.
ಪರಿಸರದ ಕಾರಣಗಳು
ಇತ್ತೀಚಿನ ವರ್ಷಗಳಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿರುವುದರಿಂದ, ಮಣ್ಣಿನಲ್ಲಿರುವ ಪೌಷ್ಟಿಕಾಂಶ ನಶಿಸುತ್ತಿರುವ ಕಾರಣದಿಂದಲೂ ಕೇಸರಿ ಕೃಷಿಯ ಪ್ರಮಾಣ ಕಡಿಮೆಯಾಗಿದೆ.
ಸರ್ಕಾರದ ಬೆಂಬಲದ ಕೊರತೆ
ಕಾಶ್ಮೀರದ ರೈತರು ಸಿಮೆಂಟ್ ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ ನಡೆಸಿದರೂ ಸರ್ಕಾರ ಕೇಸರಿ ಕೃಷಿ ಪ್ರದೇಶಗಳ ಸಮೀಪವೇ ಸಿಮೆಂಟ್ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿಯನ್ನು ನೀಡಿದೆ.
ಮಾರುಕಟ್ಟೆಯ ಸವಾಲುಗಳು
ಕೇಸರಿ ಕೃಷಿ ಉತ್ಪನ್ನಕ್ಕೆ ಸರಿಯಾದ ಬೆಲೆ ಮತ್ತು ಸೂಕ್ತ ಮಾರುಕಟ್ಟೆಯ ವ್ಯವಸ್ಥೆ ಸಿಗದೇ ಇರುವುದರಿಂದ ಈ ಉತ್ಪನ್ನದ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಇಳಿಮುಖ ಕಂಡಿದೆ.
ಭೌಗೋಳಿಕ ಸ್ಥಿತಿಗತಿಗಳು
ಕೇಸರಿ ಬೆಳೆಯನ್ನು ಸಮುದ್ರ ಮಟ್ಟದಿಂದ 2,000 ಮೀಟರ್ ಎತ್ತರದ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಹುದಾಗಿದ್ದು , 12 ಗಂಟೆಗಳ ಕಾಲ ಸೂರ್ಯನ ಕಿರಣಗಳ ಅವಶ್ಯಕತೆ ಇರುತ್ತದೆ. ಕ್ಯಾಲ್ಸಿಯಂ ಕಾರ್ಬೋನೇಟ್ ಹೇರಳವಾಗಿ ಇರುವಂತಹ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯಬಹುದಾಗಿದ್ದು, ವರ್ಷಕ್ಕೆ 1000 ದಿಂದ 1,500 ಮಿಲಿಮೀಟರ್ ಮಳೆಯ ಅಗತ್ಯ ವಿರುತ್ತದೆ.
ಕೇಸರಿಯ ಉಪಯುಕ್ತತೆಗಳು
ವೈದ್ಯಕೀಯ, ಸೌಂದರ್ಯವರ್ಧಕ ಹಾಗೂ ಸಾಂಪ್ರದಾಯಿಕ ಭಕ್ಷಗಳಾದ ಪಾನೀಯ, ಮಿಠಾಯಿ, ಡೈರಿ ಉತ್ಪನ್ನಗಳಲ್ಲಿ ಬಳಕೆಯಾಗುತ್ತದೆ.
ಕೇಂದ್ರ ಸರ್ಕಾರದ ಮಾನ್ಯತೆ: ಕೇಂದ್ರ ಸರ್ಕಾರ 2020ರಲ್ಲಿ ಭೌಗೋಳಿಕ ಸೂಚಿ ದೃಢೀಕರಣ ಪತ್ರವನ್ನು ನೀಡಿದ್ದು, ಜಾಗತಿಕ ಮಟ್ಟದ ಪಾರಂಪರಿಕ ಕೃಷಿ ವ್ಯವಸ್ಥೆಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಹೊಂದಿದೆ.
ಸರ್ಕಾರದ ಉತ್ತೇಜನ ಕ್ರಮಗಳು
ರಾಷ್ಟ್ರೀಯ ಕೇಸರಿ ಅಭಿಯಾನವನ್ನು 2010-11ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ.
→ಕಾಶ್ಮೀರದ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
→ನಾರ್ತ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಶನ್ ಅಂಡ್ ರೀಚ್(NECTAR) -
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕೇಸರಿ ಕೃಷಿಯನ್ನು ಹಮ್ಮಿಕೊಳ್ಳಲು ಪೂರಕವಾದ ಅಂಶಗಳ ಬಗ್ಗೆ ಅಧ್ಯಯನವನ್ನು ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.