ತೆರಿಗೆ, ಪ್ಯಾನ್, ಕ್ರೆಡಿಟ್ ಕಾರ್ಡ್ ವಿಚಾರವಾಗಿ ಕೆಲವು ಬದಲಾವಣೆಗಳು ಇಂದಿನಿಂದ ಜಾರಿಗೆ ಬರಲಿವೆ. ಅವುಗಳು ಏನು ಎಂಬುದರ ಕಿರು ವಿವರ ಇಲ್ಲಿದೆ.
1) ಪ್ಯಾನ್–ಆಧಾರ್ ಜೋಡಣೆ: ಪ್ಯಾನ್ ಸಂಖ್ಯೆಯನ್ನು ಆಧಾರ್ ಜೊತೆ ಜೋಡಿಸದೆ ಇದ್ದರೆ, ಜುಲೈ 1ರ ನಂತರ ಆ ಕೆಲಸಕ್ಕೆ ಮುಂದಾದರೆ ₹ 1,000 ದಂಡ ಪಾವತಿ ಮಾಡಬೇಕಾಗುತ್ತದೆ. ಜೂನ್ 30ರೊಳಗೆ ಜೋಡಣೆ ಮಾಡುವವರು ₹ 500 ದಂಡ ಪಾವತಿ ಮಾಡಿದ್ದರೆ ಸಾಕಿತ್ತು.
ಆಧಾರ್ ಜೊತೆ ಜೋಡಣೆ ಆಗದ ಪ್ಯಾನ್ ಸಂಖ್ಯೆಗಳು 2023ರ ಮಾರ್ಚ್‌ವರೆಗೆ ಚಾಲ್ತಿಯಲ್ಲಿ ಇರುತ್ತವೆ. ಅಂತಹ ಪ್ಯಾನ್ ಸಂಖ್ಯೆ ಬಳಸಿ ಮಾರ್ಚ್ 31ರವರೆಗೆ ಆದಾಯ ವಿವರ ಸಲ್ಲಿಸಬಹುದು, ತೆರಿಗೆ ರೀಫಂಡ್ ಪಡೆದುಕೊಳ್ಳಬಹುದು. 2023ರ ಮಾರ್ಚ್ 31ರವರೆಗೂ ಜೋಡಣೆ ಮಾಡದೆ ಇದ್ದರೆ, ಪ್ಯಾನ್ ಸಂಖ್ಯೆ ನಿಷ್ಕ್ರಿಯವಾಗುತ್ತದೆ.
2) ಕೋರಿಕೆ ಇಲ್ಲದೆ ಕ್ರೆಡಿಟ್ ಕಾರ್ಡ್: ಗ್ರಾಹಕರಿಂದ ಕೋರಿಕೆ ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ನೀಡಬಾರದು, ಗ್ರಾಹಕರಿಂದ ಒಪ್ಪಿಗೆ ಪಡೆಯದೆ ಹಾಲಿ ಇರುವ ಕ್ರೆಡಿಟ್ ಕಾರ್ಡ್‌ಗಳನ್ನು ಮೇಲ್ದರ್ಜೆಗೆ ಏರಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಸೂಚನೆಯು ಜುಲೈ 1ರಿಂದ ಜಾರಿಗೆ ಬರಲಿದೆ.
ಈ ಸೂಚನೆ ಉಲ್ಲಂಘಿಸಿದರೆ ಕಂಪನಿಗಳು, ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತದ ಎರಡರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕು ಎಂದು ಆರ್‌ಬಿಐ ಹೇಳಿದೆ. ಬಾಕಿ ಮೊತ್ತ ವಸೂಲು ಮಾಡುವ ಸಂದರ್ಭದಲ್ಲಿ ಗ್ರಾಹಕರಿಗೆ ಬೆದರಿಕೆ ಒಡ್ಡಬಾರದು, ಅವರಿಗೆ ಕಿರುಕುಳ ನೀಡಬಾರದು ಎಂದು ಕಾರ್ಡ್ ವಿತರಣಾ ಕಂಪನಿಗಳಿಗೆ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡುವ ಏಜೆಂಟ್‌ಗಳಿಗೆ ತಾಕೀತು ಮಾಡಿದೆ.
3) ಕ್ರಿಪ್ಟೊ ಟಿಡಿಎಸ್: ಕ್ರಿಪ್ಟೊಕರೆನ್ಸಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಶೇಕಡ 1ರಷ್ಟು ತೆರಿಗೆಯನ್ನು ಮೂಲದಲ್ಲೇ ಕಡಿತ ಮಾಡಿಕೊಳ್ಳಬೇಕು ಎಂಬ ನಿಯಮವು ಜುಲೈ 1ರಿಂದ ಜಾರಿಗೆ ಬರಲಿದೆ.
4) ಉಡುಗೊರೆಗೆ ಟಿಡಿಎಸ್: ಕೇಂದ್ರ ಸರ್ಕಾರವು ಬಜೆಟ್ ಸಂದರ್ಭದಲ್ಲಿ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆಯೊಂದನ್ನು ತಂದಿದೆ. ಸೆಕ್ಷನ್ 194(ಆರ್) ಅನ್ವಯ, ಒಂದು ವರ್ಷದಲ್ಲಿ ₹ 20 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಉಡುಗೊರೆಯನ್ನು ಅಥವಾ ಸೌಲಭ್ಯವನ್ನು ಯಾವುದೇ ವೃತ್ತಿ ಅಥವಾ ವಹಿವಾಟಿನಲ್ಲಿ ತೊಡಗಿದ್ದವನಿಗೆ ನೀಡಿದರೆ ಅದಕ್ಕೆ ಶೇ 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಈ ಉಡುಗೊರೆ ಅಥವಾ ಸೌಲಭ್ಯವು ಅದನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಗೆ ಅವನ ವೃತ್ತಿಯ ಕಾರಣದಿಂದಾಗಿ ಸಿಕ್ಕಿದ್ದಾಗಿರಬೇಕು ಎಂದು ಸೆಕ್ಷನ್ ಹೇಳುತ್ತದೆ. ಈ ನಿಯಮವು ಜುಲೈ 1ರಿಂದ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.