ಹುಬ್ಬಳ್ಳಿ: ಮೆಣಸಿನಕಾಯಿ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ತಲುಪಿಸಲು ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಸಾಂಬಾರು ಮಂಡಳಿಗೆ ಸಲಹೆ ಮಾಡಿದರು.
ನಗರದ ಮೂರುಸಾವಿರ ಮಠದ ಶಾಲಾ ಮೈದಾನದಲ್ಲಿ ಶುಕ್ರವಾರಕರ್ನಾಟಕ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರ ಶಿವ ಹಾಗೂ ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆಯ ಸಹಯೋಗದಲ್ಲಿ ಆರಂಭವಾದ ಮೂರು ದಿನಗಳ 9ನೇ ವರ್ಷದ ಮೆಣಸಿನಕಾಯಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಳೆಯ ಕೊರತೆಯಿಂದಾಗಿ ರೈತರು ಸರಿಯಾದ ಬೆಳೆ ಹಾಗೂ ಇಳುವರಿಯನ್ನು ಪಡೆಯಲು ಆಗುತ್ತಿಲ್ಲ. ಇದರ ಮಧ್ಯೆ ಬೆಳಗೆ ಸರಿಯಾದ ಬೆಲೆ ಸಿಗದೆ ರೈತರ ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರನ್ನು ಉತ್ತೇಜಿಸಲು ಹಾಗೂ ಅವರ ಬೆಳೆಗೆ ಉತ್ತಮ ಧಾರಣೆ ದೊರಕಿಸಿಕೊಡುವಲ್ಲಿ ಒಣ ಮೆಣಸಿಕಾಯಿ ಮೇಳ ಸಹಕಾರಿಯಾಗಿದೆ ಎಂದರು.
‘ರೈತರದು ಕೊಡುವ ಕೈ, ಬೇಡುವ ಕೈಯಲ್ಲ. ಕುಂದಗೋಳ, ಮಂಟೂರು, ಕುಸಗುಲ್, ಅಣ್ಣಿಗೇರಿ, ದ್ಯಾವನೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ಒಣ ಮೆಣಸಿಕಾಯಿಗೆ ವಿದೇಶದಲ್ಲಿ ಉತ್ತಮ ಬೇಡಿಕೆ ಇದೆ. ಗುಂಟೂರು ಕಾಯಿ ಹದಿನೈದು ದಿನಗಳಿಗೂ ಹೆಚ್ಚಿನ ಕಾಲ ಇಟ್ಟರೆ ಕೆಡುತ್ತದೆ. ಆದರೆ ಕುಂದಗೋಳದ ಡಿಲಕ್ಸ್ ತಳಿಯ ಒಣ ಮೆಣಸಿನಕಾಯಿ ವರ್ಷಗಟ್ಟಲೇ ಕೆಡುವುದಿಲ್ಲ. ಇಲ್ಲಿನ ರೈತರು ಸಾವಯವ ಮಾರ್ಗದಿಂದ ಬೆಳೆಯುವ ಈ ಒಣಮಣಸಿಕಾಯಿಗೆ ವಿದೇಶದಲ್ಲಿ ಉತ್ತಮ ಬೆಲೆ ಇದೆ. ಸ್ವತಃ ರೈತನಾಗಿರುವ ನಾನು ನರಗುಂದ ಎನ್ನುವ ಬ್ಯಾಂಕ್ ವ್ಯವಸ್ಥಾಪಕರ ಸಹಾಯದಿಂದ 1989ರಲ್ಲಿ ಒಣಮೆಣಸಿನಕಾಯಿ ಬೆಳದು ಸಫಲತೆ ಕಂಡಿದ್ದೇನೆ’ ಎಂದು ಹೇಳಿದರು.
ಅಧ್ಯಕ್ಷತೆದ್ದ ಶಾಸಕರು, ಡಾ.ಬಾಬು ಜಗಜೀವನರಾಂ ಚರ್ಮಕೈಗಾರಿಕೆ ನಿಗಮದ ಅಧ್ಯಕ್ಷ ಪ್ರಸಾದಅಬ್ಬಯ್ಯ, ‘ಒಣ ಮೆಣಸಿನಕಾಯಿ ಮೇಳ ಆಯೋಜಿಸುವ ಮೂಲಕ ರೈತರು, ಬೆಳೆಗಾರರು, ಗ್ರಾಹಕರು, ವಿಜ್ಞಾನಿಗಳು, ಸಂಸ್ಕರಣಾಧಾರರನ್ನು ಒಂದೇ ವೇದಿಕೆಯಲ್ಲಿ ತರಲಾಗಿದೆ. ನೇರ ಮಾರುಕಟ್ಟೆ ಒದಗಿಸುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ. ಜಿಲ್ಲಾ ಮಟ್ಟದಲ್ಲೂ ಸಾಂಬಾರು ಮಂಡಳಿಯ ಕಚೇರಿ ಸ್ಥಾಪಿಸಲು ರೈತರಿಂದ ಬೇಡಿಕೆ ಬಂದಿದೆ. ಕೃಷಿ ವಲಯಕ್ಕೆ ಸರ್ಕಾರಗಳು ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು’ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಹುಬ್ಬಳ್ಳಿ ಎ.ಪಿ.ಎಂ.ಸಿ. ಅಧ್ಯಕ್ಷ ಜಗನ್ನಾಥಗೌಡ ಪಿ. ಸಿದ್ದನಗೌಡ್ರ, ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ ಹೆಬಸೂರು, ಅಮರ ಶಿವ ರೈತ ಉತ್ಪಾದಕ ಸಂಸ್ಥೆ ಅಧ್ಯಕ್ಷ ಜಗದೀಶ ಉಪ್ಪಿನ, ಕುಂದಗೋಳ ಎ.ಪಿ.ಎಂ.ಸಿ ಅಧ್ಯಕ್ಷ ಬೀರಪ್ಪ ಕುರುಬರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ ಕುಮಾರ ಪಾಟೀಲ, ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಹುಲ್ಲೋಳಿ, ತೋಟಗಾರಿಕೆ ಉಪನಿರ್ದೇಶಕ ಡಾ.ರಾಮಚಂದ್ರ ಕೆ. ಮಡಿವಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.