ಶಾಂಘೈ/ಹಾಂಗ್‌ಕಾಂಗ್: ಸ್ಪರ್ಧೆಗೆ ತಡೆ ಒಡ್ಡುವ ತಂತ್ರಗಳನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಚೀನಾದ ನಿಯಂತ್ರಣ ಸಂಸ್ಥೆಸ್ಟೇಟ್ ಅಡ್ಮಿನಿಸ್ಟ್ರೇಷನ್ ಫಾರ್ ಮಾರ್ಕೆಟ್ ರೆಗ್ಯುಲೇಷನ್ (ಎಸ್‌ಎಎಂಆರ್), ಅಲಿಬಾಬಾ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ ದಾಖಲೆಯ ₹ 20,075 ಕೋಟಿ ದಂಡ ವಿಧಿಸಿದೆ.
ನಂಬಿಕೆದ್ರೋಹಕ್ಕೆ ಸಂಬಂಧಿಸಿದಂತೆ ಜಾಗತಿಕವಾಗಿ ವಿಧಿಸಲಾದ ಗರಿಷ್ಠ ಮಟ್ಟದ ದಂಡಗಳಲ್ಲಿ ಇದೂ ಒಂದಾಗಿದೆ.
ತನ್ನ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಚಿಲ್ಲರೆ ವ್ಯಾಪಾರಿಗಳು ಬೇರೆ ಫ್ಲಾಟ್‌ಫಾರ್ಮ್ ಬಳಸುವುದನ್ನು ತಡೆಯುವ ಮೂಲಕ ಸ್ಪರ್ಧೆಯನ್ನು ಮಿತಿಗೊಳಿಸುತ್ತಿದ್ದು, ಸರಕುಗಳ ಮುಕ್ತ ಮಾರಾಟಕ್ಕೆ ಅಡ್ಡಿಪಡಿಸುತ್ತಿದೆ. ಇದಕ್ಕಾಗಿ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅಲಿಬಾಬಾಗೆ ದಂಡ ವಿಧಿಸಲಾಗಿದೆ ಎಂದು ಎಸ್‌ಎಎಂಆರ್ ತಿಳಿಸಿದೆ. ಈ ದಂಡವು 2019ರಲ್ಲಿಕಂಪನಿಯ ದೇಶಿ ವರಮಾನದ ಶೇ 4ರಷ್ಟಕ್ಕೆ ಸಮನಾಗಿದೆ ಎಂದೂ ಅದು ತಿಳಿಸಿದೆ.
ಚೀನಾದ ಏಕಸ್ವಾಮ್ಯ ವಿರೋಧಿ ಕಾನೂನಿನ ಅಡಿಯಲ್ಲಿ ಆಡಳಿತಾತ್ಮಕ ದಂಡ ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸುವಂತೆಯೂ ಅಲಿಬಾಬಾ ಸಮೂಹಕ್ಕೆ ಆದೇಶಿಸಿದೆ.
ದಂಡವನ್ನು ಒಪ್ಪಿಕೊಳ್ಳುವುದಾಗಿ ಮತ್ತು ಪಾಲಿಸುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ದಂಡದ ಕುರಿತು ಚರ್ಚಿಸಲು ಸೋಮವಾರ ಕಾನ್ಫರೆನ್ಸ್ ಕಾಲ್ ನಡೆಸಲು ನಿರ್ಧರಿಸಿದೆ.
ಕಾನೂನಿಗೆ ಅನುಗುಣವಾಗಿ ತನ್ನ ಕಾರ್ಯಾಚರಣೆಯನ್ನು ಬಲಪಡಿಸುವುದಾಗಿ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದಾಗಿ ಕಂಪನಿಯು ವಾಗ್ದಾನ ಮಾಡಿದೆ ಎಂದು ಸಿಜಿಟಿಎನ್ ಟಿವಿಯು ವರದಿ ಮಾಡಿದೆ.
ಅಲಿಬಾಬಾ ಸ್ಥಾಪಕ ಜಾಕ್ ಮಾ ಅವರುಅಕ್ಟೋಬರ್‌ನಲ್ಲಿ ಚೀನಾದ ಹಣಕಾಸು ವ್ಯವಸ್ಥೆಯ ಬಗ್ಗೆ ಕಟು ವಿಮರ್ಶೆಯ ಮಾತುಗಳನ್ನು ಆಡಿದ್ದರು. ಆ ಬಳಿಕ ಮಾ ಅವರ ‘ಆ್ಯಂಟ್’ ಕಂಪನಿ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ (ಐಪಿಒ) ಪ್ರಕ್ರಿಯೆಯನ್ನು ಚೀನಾದ ಅಧಿಕಾರಿಗಳು ರದ್ದು ಮಾಡಿದ್ದರು. ನಂತರ ಇದೀಗ ಕಂಪನಿಯ ವಿರುದ್ಧ ಈ ಕ್ರಮ ಜರುಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.