ಸ್ಯಾನ್‌ಫ್ರಾನ್ಸಿಸ್ಕೊ: ಬಿಟ್‌ಕಾಯಿನ್ ಪಾವತಿಸಿ ವಿದ್ಯುತ್ ಚಾಲಿತ ಕಾರು ಖರೀದಿಸಬಹುದು ಎಂಬ ಘೋಷಣೆಗೆ ಟೆಸ್ಲಾ ಕಂಪನಿಯು ಬ್ರೇಕ್ ಹಾಕಿದೆ. ಬಿಟ್‌ಕಾಯಿನ್ ಸೃಷ್ಟಿಸುವ ಪ್ರಕ್ರಿಯೆಯು ಪರಿಸರಕ್ಕೆ ಹಾನಿ ಉಂಟುಮಾಡುವಂಥದ್ದು ಎಂಬ ಕಾರಣಕ್ಕೆ ಟೆಸ್ಲಾ ಹೀಗೆ ಮಾಡಿದೆ.
‘ಬಿಟ್‌ಕಾಯಿನ್ ಸೃಷ್ಟಿಸಲು ಹಾಗೂ ಬಿಟ್‌ಕಾಯಿನ್ ಬಳಸಿ ನಡೆಸುವ ವಹಿವಾಟಿಗೆ ಪಳೆಯುಳಿಕೆ ಇಂಧನದಿಂದ ಸಿಗುವ ವಿದ್ಯುತ್ ಬಳಕೆ ಆಗುತ್ತಿರುವುದು ನಮ್ಮಲ್ಲಿ ಕಳವಳ ಮೂಡಿಸಿದೆ. ಪಳೆಯುಳಿಕೆ ಇಂಧನವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಉಗುಳುವಂಥದ್ದು’ ಎಂದು ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲಾನ್ ಮಸ್ಕ್ ಅವರು ಟ್ವೀಟ್ ಮಾಡಿದ್ದಾರೆ.
‘ಕ್ರಿಪ್ಟೊಕರೆನ್ಸಿಯು ಒಳ್ಳೆಯದು, ಇದರ ಭವಿಷ್ಯ ಭರವಸೆದಾಯಕವಾಗಿದೆ ಎಂದು ನಾವು ನಂಬಿದ್ದೇವೆ. ಆದರೆ ಇದರ ಹೆಸರಿನಲ್ಲಿ ಪರಿಸರದ ಮೇಲೆ ಅಪಾರ ಪ್ರಮಾಣದ ಹಾನಿ ಆಗಬಾರದು’ ಎಂದೂ ಅವರು ಹೇಳಿದ್ದಾರೆ. ಹೊಸ ಬಿಟ್‌ಕಾಯಿನ್‌ಗಳ ಸೃಷ್ಟಿಗೆ ಅಪಾರ ಪ್ರಮಾಣದಲ್ಲಿ ವಿದ್ಯುತ್ ಬೇಕಾಗುತ್ತದೆ.
ಮಸ್ಕ್ ಅವರು ಟ್ವೀಟ್ ಮಾಡಿದ ಕೆಲವು ಹೊತ್ತಿನಲ್ಲಿ ಬಿಟ್‌ಕಾಯಿನ್ ಮೌಲ್ಯದಲ್ಲಿ ಕುಸಿತ ಕಂಡುಬಂತು. ನಂತರ ತುಸು ಚೇತರಿಕೆ ದಾಖಲಿಸಿತು. ವಿದ್ಯುತ್ ಚಾಲಿತ ಕಾರು ಖರೀದಿಸುವವರು ಬಿಟ್‌ಕಾಯಿನ್ ಮೂಲಕ ಹಣ ಪಾವತಿಸಬಹುದು ಎಂಬುದನ್ನು ಟೆಸ್ಲಾ ಮಾರ್ಚ್ ತಿಂಗಳಿನಿಂದ ಜಾರಿಗೆ ತಂದಿತ್ತು.
ಟೆಸ್ಲಾ ಕಂಪನಿಯು ತಾನು ಹೊಂದಿರುವ ಬಿಟ್‌ಕಾಯಿನ್‌ಗಳನ್ನು ಮಾರುವುದಿಲ್ಲ ಎಂದು ಮಸ್ಕ್ ಹೇಳಿದ್ದಾರೆ. ಬಿಟ್‌ಕಾಯಿನ್ ಸೃಷ್ಟಿಸುವ ಪ್ರಕ್ರಿಯೆಯು ಇನ್ನಷ್ಟು ಪರಿಸರ ಸ್ನೇಹಿ ಆದ ನಂತರ ಅದರ ಬಳಕೆ ಮುಂದುವರಿಸಲು ಕಂಪನಿ ಆಲೋಚಿಸಿದೆ.
ಟೆಸ್ಲಾ ಕಂಪನಿಯು ಭಾರತದಲ್ಲಿ ಕೂಡ ಕಾರ್ಯಾಚರಣೆ ಆರಂಭಿಸಲಿದೆ. ಬೆಂಗಳೂರಿನಲ್ಲಿ ಮಳಿಗೆ ತೆರೆಯಲು ಸೂಕ್ತ ಜಾಗ ಅರಸುತ್ತಿದೆ ಎಂಬ ವರದಿಗಳು ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.