ನವದೆಹಲಿ: ಸಿಎನ್‌ಜಿ ಮತ್ತು ಕೊಳವೆ ಮೂಲಕ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರವನ್ನು ತಲಾ ₹ 3ರಷ್ಟು ಹೆಚ್ಚಿಸಲಾಗಿದೆ.
ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್‌ನ (ಐಜಿಎಲ್) ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಸಿಎನ್‌ಜಿ ದರ ಪ್ರತಿ ಕೆ.ಜಿಗೆ ₹3ರಷ್ಟು ಏರಿಕೆ ಮಾಡಲಾಗಿದೆ. ನಾಲ್ಕು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ದರ ಹೆಚ್ಚಿಸಲಾಗಿದೆ. ಇದರಿಂದಾಗಿ ದೆಹಲಿಯಲ್ಲಿ ಸಿಎನ್‌ಜಿ ದರವು ಕೆ.ಜಿಗೆ ₹78.61ಕ್ಕೆ ತಲುಪಿದೆ.
ಪಿಎನ್‌ಜಿ ದರವು ಪ್ರತಿ ಕ್ಯುಬಿಕ್ ಮೀಟರ್‌ಗೆ ₹3ರಷ್ಟು ಹೆಚ್ಚಿಸಲಾಗಿದೆ. ಮಾರಾಟ ದರವು ₹53.59ಕ್ಕೆ ಏರಿಕೆ ಆಗಿದೆ. ಮಾರ್ಚ್ 7ರ ಬಳಿಕ 14ನೇ ಬಾರಿಗೆ ಸಿಎನ್‌ಜಿ ದರ ಹೆಚ್ಚಿಸಲಾಗಿದೆ. ಅಂತೆಯೇ, 2021ರ ಆಗಸ್ಟ್ ಬಳಿಕ 10ನೇ ಬಾರಿಗೆ ಪಿಎನ್‌ಜಿ ದರದಲ್ಲಿ ಏರಿಕೆ ಮಾಡಲಾಗಿದೆ.
ನೊಯಿಡಾ, ಗ್ರೇಟರ್ ನೊಯಿಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮದಲ್ಲಿಯೂ ದರ ಹೆಚ್ಚಿಸಲಾಗಿದೆ ಎಂದು ಐಜಿಎಲ್ ತಿಳಿಸಿದೆ.
ಮುಂಬೈನಲ್ಲಿ ವಹಿವಾಟು ನಡೆಸುವ ಮಹಾನಗರ್ ಗ್ಯಾಸ್ ಲಿಮಿಟೆಡ್ (ಎಂಜಿಎಲ್) ಈಗಾಗಲೇ ಸಿಎನ್‌ಜಿ ದರ ಕೆ.ಜಿಗೆ ₹6 ಮತ್ತು ಪಿಎನ್‌ಜಿ ದರ ಪ್ರತಿ ಕ್ಯುಬಿಕ್ ಮೀಟರ್‌ಗೆ ₹4ರಷ್ಟು ಹೆಚ್ಚಳ ಮಾಡಿದೆ.
ಕೇಂದ್ರ ಸರ್ಕಾರವು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ನೈಸರ್ಗಿಕ ಅನಿಲ ದರವನ್ನು ಶೇ 40ರಷ್ಟು ಹೆಚ್ಚಳ ಮಾಡಿರುವುದಕ್ಕೆ ಅನುಗುಣವಾಗಿ ಸಿಎನ್‌ಜಿ ಮತ್ತು ಪಿಎನ್‌ಜಿ ದರ ಏರಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.