ನವದೆಹಲಿ: ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ಸಾಂದ್ರಿಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆಯನ್ನು ಶೇ 20ರಷ್ಟು ಕಡಿತಗೊಳಿಸಿದೆ. ಮತ್ತೊಂದೆಡೆ ಇಂಧನದ ಮೇಲಿನ ಅಬಕಾರಿ ಸುಂಕವನ್ನೂ ಕಡಿತಗೊಳಿಸಿಲ್ಲ. ಹಾಗಾಗಿ, ವಾಹನಗಳಿಗೆ ಬಳಸುವ ಸಿಎನ್‌ಜಿ ದರವು ಕೆ.ಜಿಗೆ ₹4ರಿಂದ ₹6 ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಆಟೊ, ಕಾರು ಸೇರಿ ವಿವಿಧ ವಾಹನಗಳಿಗೆ ಸಿಎನ್‌ಜಿ ಬಳಕೆ ಹೆಚ್ಚುತ್ತಿದೆ. ಹಾಗಾಗಿ, ಬಳಕೆದಾರರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.
ಅರಬ್ಬೀ ಸಮುದ್ರದಿಂದ ಬಂಗಾಳ ಕೊಲ್ಲಿವರೆಗೆ ಕಡಲ ತಳದಿಂದ ಕಚ್ಚಾ ನೈಸರ್ಗಿಕ ಅನಿಲವನ್ನು ಹೊರೆ ತೆಗೆಯಲಾಗುತ್ತದೆ. ಬಳಿಕ ಇದನ್ನು ಸಿಎನ್‌ಜಿ ಆಗಿ ಪರಿವರ್ತಿಸಿ ವಾಹನಗಳು ಮತ್ತು ಕೊಳವೆ ಮೂಲಕ ಅಡುಗೆ ಮನೆಗಳಿಗೆ ಅನಿಲ (ಪಿಎನ್‌ಜಿ) ಪೂರೈಸಲಾಗುತ್ತದೆ.
ಸಿಎನ್‌ಜಿ ಉತ್ಪಾದನೆ ಮೇಲೆ ಕೇಂದ್ರ ಸರ್ಕಾರವು ಸಂಪೂರ್ಣ ನಿಯಂತ್ರಣ ಹೊಂದಿದೆ. ನಗರ ಪ್ರದೇಶದ ಚಿಲ್ಲರೆ ಮಾರಾಟಗಾರರಿಗೆ ಸರ್ಕಾರವೇ ನೇರವಾಗಿ ಪೂರೈಸುತ್ತದೆ.
ಆದರೆ, ವಾರ್ಷಿಕವಾಗಿ ಅನಿಲದ ಉತ್ಪಾದನೆಯು ಶೇ 5ರಷ್ಟು ಕಡಿಮೆಯಾಗುತ್ತಿದೆ. ಈ ನೈಸರ್ಗಿಕ ಕುಸಿತದಿಂದಾಗಿ ನಗರ ಪ್ರದೇಶಕ್ಕೆ ಸರಬರಾಜು ಆಗುವ ಅನಿಲ ಪೂರೈಕೆಯನ್ನು ಸರ್ಕಾರವು ಕಡಿತಗೊಳಿಸಿದೆ ಎಂದು ಮೂಲಗಳು ಹೇಳಿವೆ.
ಸರ್ಕಾರವು ಸಿಎನ್‌ಜಿ ಉತ್ಪಾದನೆಗಾಗಿ ಕಚ್ಚಾ ವಸ್ತುಗಳ ಪೂರೈಕೆಯನ್ನೂ ಕಡಿತಗೊಳಿಸಿದೆ. ಆದರೂ, ಕೊಳವೆ ಮೂಲಕ ಅಡುಗೆ ಮನೆಗಳಿಗೆ ಪೂರೈಸುವ ಅನಿಲದ ಸರಬರಾಜಿಗೆ ಯಾವುದೇ ಧಕ್ಕೆಯಾಗದಂತೆ ಕ್ರಮವಹಿಸಿದೆ ಎಂದು ತಿಳಿಸಿವೆ.
ಸರ್ಕಾರದ ಕ್ರಮದಿಂದ ಮಾರುಕಟ್ಟೆಯಲ್ಲಿ ಸಿಎನ್‌ಜಿ ಪೂರೈಕೆ ಕಡಿಮೆಯಾಗಲಿದೆ. ಈ ಕೊರತೆ ನೀಗಿಸಲು ನಗರ ಪ್ರದೇಶದ ಚಿಲ್ಲರೆ ಮಾರಾಟಗಾರರು ಸಿಎನ್‌ಜಿಯ ಆಮದಿಗೆ ಒತ್ತಾಯಿಸುತ್ತಿದ್ದಾರೆ. ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಖರೀದಿಗೂ ಮುಂದಾಗಿದ್ದಾರೆ. ಇದರಿಂದ ಸಿಎನ್‌ಜಿ ಬೆಲೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ತಿಳಿಸಿವೆ.
‘ಸದ್ಯ ಚಿಲ್ಲರೆ ಮಾರಾಟಗಾರರು ಸಿಎನ್‌ಜಿ ಬೆಲೆ ಏರಿಕೆಗೆ ಮುಂದಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಹುಡುಕುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜೊತೆಗೆ ಚರ್ಚೆಯಲ್ಲಿ ತೊಡಗಿದ್ದಾರೆ’ ಎಂದು ಹೇಳಿವೆ.
ಅಬಕಾರಿ ಸುಂಕ ಎಷ್ಟು?
ಪ್ರಸ್ತುತ ಕೇಂದ್ರ ಸರ್ಕಾರವು ಸಿಎನ್‌ಜಿ ಮೇಲೆ ಶೇ 14ರಷ್ಟು ಅಬಕಾರಿ ಸುಂಕ ವಿಧಿಸುತ್ತಿದೆ. ಇದರಿಂದ ಪ್ರತಿ ಕೆ.ಜಿಗೆ ₹14ರಿಂದ ₹15 ದರ ಹೆಚ್ಚಳವಾಗಿದೆ. ಒಂದು ವೇಳೆ ಸರ್ಕಾರವು ಸುಂಕ ಕಡಿತಗೊಳಿಸಿದರೆ ಚಿಲ್ಲರೆ ಮಾರಾಟಗಾರರು ಈ ಹಣವನ್ನು ಗ್ರಾಹಕರಿಗೆ ವರ್ಗಾಯಿಸಲಿದ್ದಾರೆ. ಇದರಿಂದ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿವೆ.
ಇಡೀ ದೇಶದಲ್ಲಿ ದೆಹಲಿ ಮತ್ತು ಮುಂಬೈ ಸಿಎನ್‌ಜಿ ಬಳಕೆಯ ಅತಿದೊಡ್ಡ ಮಾರುಕಟ್ಟೆಯಾಗಿವೆ. ಸದ್ಯ ಮಹಾರಾಷ್ಟ್ರದ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಶೀಘ್ರವೇ ದೆಹಲಿ ವಿಧಾನಸಭೆಗೂ ಚುನಾವಣೆ ಘೋಷಣೆಯಾಗಲಿದೆ. ಹಾಗಾಗಿ ಸದ್ಯ ದರ ಏರಿಕೆಯು ರಾಜಕೀಯ ವಿಷಯವೂ ಆಗಿದೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.