ನವದೆಹಲಿ: ಕೇಂದ್ರ ಸರ್ಕಾರವು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಕಡಿತಗೊಳಿಸಿರುವ ಬೆನ್ನಲ್ಲೇ, ನಗರ ಪ್ರದೇಶಗಳಿಗೆ ಅನಿಲ ಪೂರೈಸುವ ಇಂದ್ರಪ್ರಸ್ಥ ಗ್ಯಾಸ್ ಕಂಪನಿ ಮತ್ತು ಅದಾನಿ ಟೋಟಲ್ ಗ್ಯಾಸ್ ಕಂಪನಿಯು, ಸಾಂದ್ರಿಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರ ಹೆಚ್ಚಿಸುವ ಸುಳಿವು ನೀಡಿವೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಸರ್ಕಾರವು ಕಂಪನಿಗಳ ಲಾಭದ ವಿರುದ್ಧವಿಲ್ಲ. ಆದರೆ, ಸಿಎನ್‌ಜಿ ತಯಾರಿಕೆಗೆ ಆಗುವ ವೆಚ್ಚದ ವಿವರವನ್ನು ಕಂಪನಿಗಳು ಘೋಷಿಸಬೇಕಿದೆ ಎಂದು ಹೇಳಿದೆ.
ಸರ್ಕಾರವು ನವೆಂಬರ್ 16ರಂದು ಕಡಿಮೆ ಬೆಲೆಯಲ್ಲಿ ನಗರ ಪ್ರದೇಶದ ಸಗಟುದಾರರಿಗೆ ನೀಡುತ್ತಿದ್ದ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಶೇ 20ರಷ್ಟನ್ನು ಕಡಿತಗೊಳಿಸಿತ್ತು. ಅಕ್ಟೋಬರ್ 20ರಂದು ಶೇ 21ರಷ್ಟು ಕಡಿತಗೊಳಿಸಿದೆ.
ಇಂದ್ರಪ್ರಸ್ಥ ಕಂಪನಿಯು ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳಿಗೆ ಸಿಎನ್‌ಜಿ ಪೂರೈಸುತ್ತದೆ. ಮಹಾನಗರ ಗ್ಯಾಸ್ ಕಂಪನಿಯು ಮುಂಬೈನಲ್ಲಿ ಸರಬರಾಜು ಮಾಡುತ್ತದೆ. ಅದಾನಿ ಕಂಪನಿಯು ಗುಜರಾತ್ ಸೇರಿ ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತದೆ.
ಸಗಟುದಾರರ ಸಿಎನ್‌ಜಿ ಉತ್ಪಾದನಾ ವೆಚ್ಚ ಮತ್ತು ಮಾರಾಟ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
2023–24ನೇ ಆರ್ಥಿಕ ವರ್ಷದಲ್ಲಿ ಇಂದ್ರಪ್ರಸ್ಥ ಕಂಪನಿಯು ₹16 ಸಾವಿರ ಕೋಟಿ ವರಮಾನಗಳಿಸಿದೆ. ಒಟ್ಟಾರೆ ₹1,748 ಕೋಟಿ ನಿವ್ವಳ ಲಾಭ ಗಳಿಸಿದೆ. ಲಾಭ ಮತ್ತು ವರಮಾನದ ನಡುವಿನ ಅನುಪಾತ ಶೇ 11ರಷ್ಟಿದೆ. ಚಿಲ್ಲರೆ ಮಾರಾಟಗಾರರು ಇಷ್ಟು ಲಾಭ ಪಡೆಯಲು ಸಾಧ್ಯವೇ? ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಭಾರತೀಯ ತೈಲ ಕಂಪನಿಗಳು ಕೂಡ ಸಗಟು ತೈಲ ಪೂರೈಕೆ ಮಾಡುತ್ತವೆ. ಇದೇ ಅವಧಿಯಲ್ಲಿ ಈ ಕಂಪನಿಗಳ ವರಮಾನ ₹8.71 ಲಕ್ಷ ಕೋಟಿ ಆಗಿದ್ದು, ಒಟ್ಟು ₹39,617 ಕೋಟಿ ನಿವ್ವಳ ಲಾಭಗಳಿಸಿವೆ. ಲಾಭ ಮತ್ತು ವರಮಾನದ ನಡುವಿನ ಅನುಪಾತ ಶೇ 4.5ರಷ್ಟಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.