ADVERTISEMENT

ಏ. 1ರಿಂದ ಕೊಬ್ಬರಿ ಖರೀದಿ?

ಕೋಲ್ಕತ್ತದಿಂದ ಇನ್ನೂ ಪೂರೈಕೆಯಾಗದ ಕೊಬ್ಬರಿ ಸಂಗ್ರಹ ಚೀಲ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 18:55 IST
Last Updated 24 ಮಾರ್ಚ್ 2024, 18:55 IST
........
........   

ಪ್ರಜಾವಾಣಿ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್‌ 1ರಿಂದ ಉಂಡೆ ಕೊಬ್ಬರಿ ಖರೀದಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಕೊಬ್ಬರಿ ಸಾಗಣೆಯ ಟೆಂಡರ್‌ ವಿಳಂಬ ಹಾಗೂ ಕೋಲ್ಕತ್ತದಿಂದ ಇನ್ನೂ ಕೊಬ್ಬರಿ ತುಂಬಲು ಅಗತ್ಯವಿರುವ ಚೀಲಗಳು ಪೂರೈಕೆಯಾಗಿಲ್ಲ. ಹಾಗಾಗಿ, ಖರೀದಿ ಪ್ರಕ್ರಿಯೆ ಆರಂಭಿಸಲು ವಿಳಂಬವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಗಳು ತಿಳಿಸಿವೆ.

ADVERTISEMENT

ತುಮಕೂರು, ಮೈಸೂರು ಮತ್ತು ಚಾಮರಾಜನಗರದಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳವು ಖರೀದಿ ಏಜೆನ್ಸಿಯಾಗಿದೆ. ಉಳಿದಂತೆ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ರಾಮನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಖರೀದಿ ಏಜೆನ್ಸಿಯಾಗಿದೆ. ‌

ಜನವರಿ ಅಂತ್ಯದಲ್ಲಿ ಆರಂಭಿಸಿದ್ದ ಹೆಸರು ನೋಂದಣಿ ವೇಳೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಎಲ್ಲಾ ಜಿಲ್ಲೆಗಳಿಗೆ ಖರೀದಿ ಏಜೆನ್ಸಿಯಾಗಿ ಸರ್ಕಾರ ನಿಯೋಜಿಸಿತ್ತು. ಆದರೆ, ನೋಂದಣಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದ್ದರಿಂದ ಈ ನೋಂದಣಿಯನ್ನು ರದ್ದುಪಡಿಸಿತ್ತು. ಬಳಿಕ ಮಾರ್ಚ್‌ 4ರಿಂದ ಮರು ನೋಂದಣಿ ಆರಂಭಿಸಲಾಗಿತ್ತು.

ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಖರೀದಿಯ ಹೊಣೆ ಹೊತ್ತಿರುವ ರಾಜ್ಯ ಕೃಷಿ ಮಾರಾಟ ಮಹಾಮಂಡಳವು ಸಾಗಣೆ, ಚೀಲ ಪೂರೈಕೆ ಸಂಬಂಧ ಪ್ರತ್ಯೇಕವಾಗಿ ಟೆಂಡರ್‌ ಆಹ್ವಾನಿಸಿದೆ. ಇದೇ ತಿಂಗಳ ಅಂತ್ಯದೊಳಗೆ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹಾಗಾಗಿ, ಹೆಸರು ನೋಂದಾಯಿಸಿರುವ ರೈತರಿಂದ ಕೊಬ್ಬರಿ ಖರೀದಿಸಲು ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು ಪ್ರಸಕ್ತ ಋತುವಿನಡಿ ರಾಜ್ಯದಲ್ಲಿ ಒಟ್ಟು 69,250 ಟನ್‌ ಕೊಬ್ಬರಿ ಖರೀದಿಸಲಿದೆ. ನಾಫೆಡ್‌ ಕೇಂದ್ರದ ಖರೀದಿ ಏಜೆನ್ಸಿಯಾಗಿದೆ.

ವಿಳಂಬಕ್ಕೆ ರೈತರ ಆಕ್ರೋಶ

ಕನಿಷ್ಠ ಬೆಂಬಲ ಬೆಲೆಯಡಿ ಕೊಬ್ಬರಿ ಖರೀದಿಸಲು ರೈತರ ಹೆಸರು ನೋಂದಣಿ ಪ್ರಕ್ರಿಯೆಯು ಮುಗಿದು ಮೂರು ವಾರ ಪೂರ್ಣಗೊಂಡಿದ್ದರೂ ಈವರೆಗೂ ಖರೀದಿ ಆರಂಭವಾಗಿಲ್ಲ. ಇದಕ್ಕೆ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನವರಿ ಅಂತ್ಯದಲ್ಲಿ ನೋಂದಣಿಗೆ ಚಾಲನೆ ನೀಡಿದ್ದ ವೇಳೆಯೇ ಬಹುತೇಕ ರೈತರು ಕೊಬ್ಬರಿಯ ಸಿಪ್ಪೆ ಸುಲಿದು ದಾಸ್ತಾನು ಮಾಡಿಟ್ಟಿದ್ದಾರೆ. ಕಾಯಿಯ ಕಂಟ ಬೇರ್ಪಡಿಸಿ ಚೀಲಕ್ಕೆ ತುಂಬಿಕೊಂಡು ಖರೀದಿ ಕೇಂದ್ರಗಳಿಗೆ ತರಲು ಎದುರು ನೋಡುತ್ತಿದ್ದಾರೆ.  ಸಿಪ್ಪೆಯನ್ನು ಬೇರ್ಪಡಿಸಿ 3 ತಿಂಗಳು ಕಳೆದಿವೆ. ಬೇಸಿಗೆಯ ಬಿಸಿಲಿನ ಝಳ ಹೆಚ್ಚುತ್ತಿದ್ದು ಕೊಬ್ಬರಿ ಒಣಗುತ್ತಿದೆ. ಮತ್ತಷ್ಟು ವಿಳಂಬ ಮಾಡಿದರೆ ಕ್ವಿಂಟಲ್‌ಗೆ ಕನಿಷ್ಠ 4ರಿಂದ 5 ಕೆ.ಜಿ ತೂಕ ಇಳಿಕೆಯಾಗಲಿದೆ. ಇಳುವರಿ ಮತ್ತಷ್ಟು ಕುಸಿತವಾದರೆ ನಮಗೆ ನಷ್ಟವಾಗಲಿದೆ ಎಂಬುದು ರೈತರ ಆತಂಕವಾಗಿದೆ. ಅಲ್ಲದೆ ಬಿಸಿಲಿಗೆ ಕೊಬ್ಬರಿ ಒಡೆದು ಹೋಳಾಗುತ್ತದೆ. ನಾಫೆಡ್ ಮಾನದಂಡದ ಪ್ರಕಾರ ಹೋಳು ಚೂರಾದ ಕೊಬ್ಬರಿ ಖರೀದಿಗೆ ಅವಕಾಶವಿಲ್ಲ ಎಂಬುದು ಅವರ ಅಳಲು. 

ಮಿಲ್ಲಿಂಗ್‌ ಕೊಬ್ಬರಿ ಖರೀದಿಗೆ ಅನುಮತಿ

ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಮಿಲ್ಲಿಂಗ್ ಕೊಬ್ಬರಿ (ಹೋಳು ಕೊಬ್ಬರಿ) ಖರೀದಿಸಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಶೀಘ್ರವೇ ಖರೀದಿ ಆರಂಭಿಸಲು ಸಂಪುಟ ಉಪ ಸಮಿತಿ ಕೂಡ ಅನುಮತಿ ನೀಡಿದೆ ಎಂದು ಮಹಾಮಂಡಳದ ಮೂಲಗಳು ತಿಳಿಸಿವೆ. ಆದರೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬರಬೇಕಿದೆ. ಆ ನಂತರ ಖರೀದಿಗೆ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಎಂದು ಹೇಳಿವೆ.  ರಾಜ್ಯದಲ್ಲಿ ಪ್ರಸಕ್ತ ಋತುವಿನಡಿ ಮಿಲ್ಲಿಂಗ್ ಕೊಬ್ಬರಿಯ ಇಳುವರಿ 11995 ಟನ್ ಆಗಿದೆ. ಈ ಪೈಕಿ 2999 ಟನ್ ಖರೀದಿಸಲಾಗುತ್ತದೆ. ಪ್ರತಿ ಕ್ವಿಂಟಲ್‌ಗೆ ₹11160 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.