ಚಿಕ್ಕಮಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,
ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲು ಪಿದೆ. ಇದರಿಂದ ಗ್ರಾಹಕರಿಗೆ ಕಾಫಿ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ.
ಬ್ರೆಜಿಲ್ ಮತ್ತು ವಿಯೆಟ್ನಾಂನಲ್ಲಿ ಕಾಫಿ ಇಳುವರಿ ಕುಸಿದಿದೆ. ಇದರಿಂದ ಕಾಫಿ ಧಾರಣೆಯು ಏರಿಕೆಯ ಪಥದಲ್ಲಿ ಸಾಗಿದೆ. ಲಂಡನ್ ಮಾರುಕಟ್ಟೆಯಲ್ಲಿ ಒಂದು ಟನ್ ರೊಬಸ್ಟಾ ಕಾಫಿ ದರವು 5,470 ಡಾಲರ್ ದಾಟಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ ಎನ್ನುತ್ತಾರೆ ಕಾಫಿ ವ್ಯಾಪಾರಿಗಳು.
ಸ್ಥಳೀಯವಾಗಿ ಸೋಮವಾರ ರೊಬಸ್ಟಾ ಕಾಫಿ ಬೆಲೆ ಕೆ.ಜಿಗೆ ₹404 ಹಾಗೂ ಅರೇಬಿಕಾ ಚೆರಿ ದರ ₹419 ಇತ್ತು. ಸದ್ಯ ಬೆಳೆಗಾರರ ಬಳಿ ಕಾಫಿ ದಾಸ್ತಾನು ಇಲ್ಲ. ಹಾಗಾಗಿ,ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ
ಆಗಿರುವ ದರ ಏರಿಕೆಯ ಲಾಭ ಪಡೆದುಕೊಳ್ಳಲು ಬೆಳೆಗಾರರಿಗೆ ಸಾಧ್ಯವಾಗುತ್ತಿಲ್ಲ.
ಏಪ್ರಿಲ್‌ನಲ್ಲಿ ಟನ್‌ಗೆ 4,200 ಡಾಲರ್ ಬೆಲೆ ಇದ್ದಾಗಲೇ ಕೆ.ಜಿಗೆ ₹400 ದರ ಇತ್ತು. ಈಗಲೂ ಅದರ ಆಸುಪಾಸಿನಲ್ಲೇ ಇದೆ. ಲಂಡನ್ ಮಾರುಕಟ್ಟೆಯ ದರಕ್ಕೆ ಹೋಲಿಸಿದರೆ ಕೆ.ಜಿಗೆ ಕನಿಷ್ಠ ₹470 ಬೆಲೆ ಇರಬೇಕಾಗಿತ್ತು ಎನ್ನುತ್ತಾರೆ ಬೆಳೆಗಾರರು.
‘ಜನವರಿಯಲ್ಲಿ ಫಸಲು ಬಂದರೆ ಬಹುತೇಕ ಏಪ್ರಿಲ್ ಮತ್ತು ಮೇ ತಿಂಗಳ ವೇಳೆಗೆ ಮಾರಾಟ ಮಾಡಿರುತ್ತಾರೆ. ಶೇ 95ರಷ್ಟು ಬೆಳೆಗಾರರ ಬಳಿ ಈಗ ಕಾಫಿ ದಾಸ್ತಾನಿಲ್ಲ. ಆದ್ದರಿಂದ ದರ ಏರಿಕೆಯ ಲಾಭ ಬೆಳೆಗಾರರಿಗೆ ದೊರಕುತ್ತಿಲ್ಲ’ ಎಂದು ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಜೈರಾಮ್ ಹೇಳುತ್ತಾರೆ.
‘ಈ ಬಾರಿ ಹವಾಮಾನ ವೈಪರೀತ್ಯದಿಂದ ಕಾಫಿ ಉತ್ಪಾದನೆ ಶೇ 30ರಿಂದ ಶೇ 40ರಷ್ಟು ಕಡಿಮೆಯಾಗುವ ಆತಂಕವಿದೆ. ವಿಪರೀತ ಮಳೆಯಿಂದ ಕೊಳೆರೋಗ ಕಾಡುತ್ತಿದೆ. ಮಳೆ, ಗಾಳಿಗೆ ಉದುರಿದ ಹಣ್ಣುಗಳು ಮಣ್ಣು ಪಾಲಾಗಿವೆ. ಅಳಿದುಳಿದ ಫಸಲು ಕೈ ಸೇರುವಷ್ಟರಲ್ಲಿ ಬೆಲೆ ಕಡಿಮೆಯಾಗಲಿದೆ. ಒಟ್ಟಾರೆ ರೈತರಿಗೆ ಲಾಭ ದೊರಕುವುದಿಲ್ಲ’ ಎಂದು ಬೆಳೆಗಾರರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.