ADVERTISEMENT

ಎಂಜಿನಿಯರಿಂಗ್‌ ಪದವೀಧರರಿಗೆ ವಾರ್ಷಿಕ ₹12 ಲಕ್ಷ ವೇತನ: ಐ.ಟಿ ಕಂಪನಿ ಕಾಗ್ನಿಜೆಂಟ್

ಪಿಟಿಐ
Published 18 ಆಗಸ್ಟ್ 2024, 13:54 IST
Last Updated 18 ಆಗಸ್ಟ್ 2024, 13:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಹೊಸದಾಗಿ ಕೆಲಸಕ್ಕೆ ಸೇರಲಿರುವ ಎಂಜಿನಿಯರಿಂಗ್‌ ಪದವೀಧರರಿಗೆ ₹4 ಲಕ್ಷದಿಂದ ₹12 ಲಕ್ಷದ ವರೆಗೆ ವಾರ್ಷಿಕ ವೇತನ ನೀಡುವುದಾಗಿ ಅಮೆರಿಕದ ಪ್ರಮುಖ ಐ.ಟಿ ಕಂಪನಿ ಕಾಗ್ನಿಜೆಂಟ್‌ ಭಾನುವಾರ ತಿಳಿಸಿದೆ.

ಕಾಗ್ನಿಜೆಂಟ್‌ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಲಿರುವ ಪದವೀಧರರಿಗೆ ವಾರ್ಷಿಕ ವೇತನ ₹2.52 ಲಕ್ಷ ಇದೆ. ಜೊತೆಗೆ ವೇತನದ ಹೆಚ್ಚಳವು ಶೇ 1ಕ್ಕಿಂತ ಕಡಿಮೆ ಇದೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿತ್ತು.

ADVERTISEMENT

ಪ್ರತಿ ವರ್ಷವೂ ಕಾಗ್ನಿಜೆಂಟ್‌ ಹೊಸ ಎಂಜಿನಿಯರಿಂಗ್‌ ಪದವೀಧರರು ಮತ್ತು ಎಂಜಿನಿಯರಿಂಗ್‌ಯೇತರ ಪದವೀಧರರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಕಂಪನಿ ತಿಳಿಸಿದೆ.

ಮೂರು ವರ್ಷದ ಪದವೀಧರರಿಗೆ (ವಿಜ್ಞಾನ, ಕಲೆ ಮತ್ತು ವಾಣಿಜ್ಯ) ವಾರ್ಷಿಕವಾಗಿ ₹2.52 ಲಕ್ಷ ಸಂಬಳವಿದೆ. ಎಂಜಿನಿಯರಿಂಗ್‌ ಪದವೀಧರರಿಗೆ ₹4 ಲಕ್ಷದಿಂದ ₹12 ಲಕ್ಷದ ವರೆಗೆ ವೇತನವಿದೆ. ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಾರ್ಷಿಕ ಶೇ 1–5ರವರೆಗೆ ವೇತನ ಹೆಚ್ಚಳವಿದೆ. ಏಕಕಾಲದಲ್ಲಿ ಎಂಜಿನಿಯರಿಂಗ್‌ ಮತ್ತು ಇತರೆ ಪದವೀಧರರ ನೇಮಕಾತಿ ನಡೆಯುತ್ತಿದೆ. ಇದರಿಂದ ಗೊಂದಲ ಉಂಟಾಗಿದೆ ಎಂದು ತಿಳಿಸಿದೆ.

‘ನೇಮಕಾತಿ ವಿಧಾನ, ಕೌಶಲದ ಆಧಾರದ ಮೇಲೆ ಹೊಸ ಎಂಜಿನಿಯರಿಂಗ್‌ ಪದವೀಧರರಿಗೆ ವಾರ್ಷಿಕ ₹4 ಲಕ್ಷದಿಂದ ₹12 ಲಕ್ಷದ ವರೆಗಿನ ವೇತನದ ಪ್ಯಾಕೇಜ್‌ ಇದೆ’ ಎಂದು ಕಾಗ್ನಿಜೆಂಟ್‌ ಅಮೆರಿಕದ ಅಧ್ಯಕ್ಷ ಸೂರ್ಯ ಗುಮ್ಮಡಿ ಹೇಳಿದ್ದಾರೆ.

ಎಂಜಿನಿಯರಿಂಗ್‌ಯೇತರ ಪದವೀಧರರನ್ನು ಆಡಳಿತ ಮತ್ತು ಇತರೆ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. ನಂತರ ಇವರಿಗೆ ಅಗತ್ಯ ಕೌಶಲ ಮತ್ತು ಮಾಹಿತಿ ತಂತ್ರಜ್ಞಾನ ತರಬೇತಿ ನೀಡಲಾಗುತ್ತದೆ. ಬಳಿಕ ಇವರನ್ನು ವಿವಿಧ ಹುದ್ದೆಗಳಿಗೆ ನಿಯೋಜಿಸಲಾಗುತ್ತದೆ. ಐ.ಟಿ ವಲಯದಲ್ಲಿ ಎಂಜಿನಿಯರಿಂಗ್‌ ಪದವೀಧರರಿಗೆ ಕಂಪನಿ ಉತ್ತಮ ವೇತನ ನೀಡುತ್ತಿದೆ ಎಂದು ಹೇಳಿದರು.

ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ವಾಣಿಜ್ಯ ಪದವಿ ಕಾಲೇಜುಗಳಿಂದ ಹೊಸಬರನ್ನು ನೇಮಿಸಿಕೊಳ್ಳುತ್ತಿದ್ದೇವೆ ಎಂದರು.

ಕಾಗ್ನಿಜೆಂಟ್‌ನಲ್ಲಿ ಜಾಗತಿಕವಾಗಿ ಒಟ್ಟು 3.36 ಲಕ್ಷ ಉದ್ಯೋಗಿಗಳಿದ್ದಾರೆ. ಇದರಲ್ಲಿ ಶೇ 70ರಷ್ಟು ಉದ್ಯೋಗಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.