ಭಾರತೀಯರಿಗೆ ಚಿನ್ನದ ಮೇಲೆ ಹೆಚ್ಚು ವ್ಯಾಮೋಹ. ಬಂಗಾರ ಖರೀದಿಯಲ್ಲಿ ಭಾರತವು ವಿಶ್ವದಲ್ಲೇ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಎರಡನೇ ರಾಷ್ಟ್ರವಾಗಿದೆ. ದೇಶದ ಮಹಿಳೆಯರ ಬಳಿ ಸುಮಾರು 25,000 ಟನ್‌ನಷ್ಟು ಬಂಗಾರವಿದೆ. ಸರಿಸುಮಾರು 2.27 ಕೋಟಿ ಕೆ.ಜಿ. ಚಿನ್ನಾಭರಣ ಹೊಂದಿದ್ದಾರೆ.
ಜಗತ್ತಿನಲ್ಲಿರುವ ಶೇ 11ರಷ್ಟು ಚಿನ್ನ ಭಾರತೀಯ ಮಹಿಳೆಯರ ಬಳಿಯೇ ಇದೆ. ಅಮೆರಿಕ, ಸ್ವಿಟ್ಜರ್‌ಲ್ಯಾಂಡ್, ಜರ್ಮನಿ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಒಟ್ಟಾಗಿ ಹೊಂದಿರುವ ಚಿನ್ನದ ಪ್ರಮಾಣಕ್ಕಿಂತ ದೇಶದ ಮಹಿಳಾ ಮಣಿಗಳು ಹೊಂದಿರುವ ಹೊನ್ನಿನ ಪ್ರಮಾಣವೇ ಜಾಸ್ತಿ ಇದೆ.
ಹಬ್ಬ, ಮದುವೆ ಸಮಾರಂಭಗಳು ಬಂದರಂತೂ ಮಹಿಳೆಯರು ನಾ ಮುಂದು ತಾ ಮುಂದು ಅಂತ ಚಿನ್ನದ ಖರೀದಿಗೆ ನಿಲ್ಲುತ್ತಾರೆ. ಪ್ರತಿವರ್ಷ ಆಭರಣ ಖರೀದಿ ಮಾಡಲೇಬೇಕು ಎಂದು ಅನೇಕರು ಗೋಲ್ಡ್ ಸ್ಕೀಂಗಳ ಮೊರೆ ಹೋಗುತ್ತಾರೆ. ಹಲವು ದಶಕಗಳಿಂದ ದೇಶದಲ್ಲಿ ಆಭರಣ ಚಿನ್ನದ ಮೇಲಿನ ಹೂಡಿಕೆ ಸ್ಕೀಂಗಳು ಚಾಲ್ತಿಯಲ್ಲಿವೆ.
ಆದರೆ, ಅಸಲಿಗೆ ಈ ಗೋಲ್ಡ್ ಸ್ಕೀಂಗಳಿಂದ ಲಾಭವಿದೆಯೇ? ಪ್ರತಿ ತಿಂಗಳ ಉಳಿತಾಯದ ಹಣವನ್ನು ಗೋಲ್ಡ್ ಸ್ಕೀಂಗೆ ಕಟ್ಟಿ ಬಂಗಾರ ಖರೀದಿಸುವುದು ಸರಿಯಾದ ಕ್ರಮವೇ? ಬನ್ನಿ ಈ ಬಗ್ಗೆ ವಿವರವಾಗಿ ಅವಲೋಕನ ಮಾಡೋಣ.
ಗೋಲ್ಡ್ ಸ್ಕೀಂ ಲೆಕ್ಕಾಚಾರ ಹೇಗಿರುತ್ತದೆ?:
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದ ಯಾವುದೇ ಭಾಗಕ್ಕೆ ಹೋದರೂ ಅಲ್ಲಿನ ಆಭರಣದ ಅಂಗಡಿಗಳು ಗೋಲ್ಡ್ ಸ್ಕೀಂ ಕೊಡುವುದನ್ನು ನೋಡಬಹುದು. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ನಿಯಮಿತವಾಗಿ ಚಿನ್ನದ ಖರೀದಿಗೆ ಪಾವತಿಸುತ್ತಾ ಹೋಗುವುದೇ ಗೋಲ್ಡ್ ಸ್ಕೀಂ.
ಸಾಮಾನ್ಯವಾಗಿ ಆಭರಣ ಮಳಿಗೆಗಳಲ್ಲಿ 10ರಿಂದ 12 ತಿಂಗಳ ಅವಧಿಗೆ ಗೋಲ್ಡ್ ಸ್ಕೀಂಗಳು ಇರುತ್ತವೆ. ₹1 ಸಾವಿರ, ₹2 ಸಾವಿರ, ₹5 ಸಾವಿರ, ₹10 ಸಾವಿರ, ₹20 ಸಾವಿರ, ₹30 ಸಾವಿರ ಹೀಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಗದಿತ ಮೊತ್ತವನ್ನು ಪ್ರತಿ ತಿಂಗಳು ಕಟ್ಟಲು ಇಲ್ಲಿ ಅವಕಾಶ ಇರುತ್ತದೆ.
ಗೋಲ್ಡ್ ಸ್ಕೀಂನ ಕೊನೆಯ ಕಂತನ್ನು ಚಿನ್ನದ ಅಂಗಡಿಯವರು ಸೇರಿಸುತ್ತಾರೆ. ಎಲ್ಲ ಕಂತು ಕಟ್ಟಿದ ಮೇಲೆ ಅದೇ ಅಂಗಡಿಯಲ್ಲಿ ಆಭರಣ ಖರೀದಿಸಬೇಕಾಗುತ್ತದೆ. ಆದರೆ, ವಿಷಯ ಏನು ಗೊತ್ತೆ? ನೀವು ಚಿನ್ನ ಕೊಳ್ಳುವುದು ಅಂದಿನ ಮಾರುಕಟ್ಟೆ ಬೆಲೆಯಲ್ಲಿ. ಗೋಲ್ಡ್ ಸ್ಕೀಂನ ಕಂತು ಕಟ್ಟಿದಾಗ ಇದ್ದ ಬೆಲೆಗೆ ಅಂಗಡಿಯವರು ಚಿನ್ನ ಕೊಡುವುದಿಲ್ಲ.
ಖರೀದಿಯ ದಿನ ಬಂಗಾರದ ಬೆಲೆ ಹೆಚ್ಚಿರಲಿ ಅಥವಾ ಕಡಿಮೆ ಇರಲಿ ಅದು ಅನ್ವಯವಾಗುತ್ತದೆ. ನಿಮಗೆ ಗೊತ್ತಿರಲಿ, ಸಾಮಾನ್ಯವಾಗಿ ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆಯೇ ಹೊರತು ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ.
ಉದಾಹರಣೆಗೆ 2023ರಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹65,330 ಆಸುಪಾಸಿನಲ್ಲಿತ್ತು. ಈಗ ₹73,000 ಸುತ್ತಮುತ್ತ ಇದೆ. ಹೀಗೆ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುವುದರಿಂದ ಗೋಲ್ಡ್ ಸ್ಕೀಂ ಕಟ್ಟಿದವರಿಗೆ ಲಾಭವಾಗುವ ಸಾಧ್ಯತೆ ತೀರಾ ಕಡಿಮೆ.
ಗೋಲ್ಡ್ ಸ್ಕೀಂಗಳಲ್ಲಿ ಚಿನ್ನದ ನಾಣ್ಯ ಅಥವಾ ಗಿಫ್ಟ್ ವೋಚರ್ ಕೊಡಲು ಆಭರಣ ಮಳಿಗೆಗಳು ಒಪ್ಪುವುದಿಲ್ಲ. ಅವರ ಬಳಿ ಚಿನ್ನ ಖರೀದಿಸುವುದಿಲ್ಲ ಎಂದರೆ ಕಟ್ಟಿರುವ ಹಣವನ್ನು ಮರಳಿಸುವುದಿಲ್ಲ. ಹಾಗಾಗಿ, ಅನಿವಾರ್ಯವಾಗಿ ಅಲ್ಲಿಯೇ ಚಿನ್ನ ಕೊಳ್ಳಬೇಕಾಗುತ್ತದೆ.
ಬಂಗಾರದ ಖರೀದಿ ವೇಳೆ ಮೇಕಿಂಗ್ ಶುಲ್ಕವೆಂದು ಶೇ 15ರಿಂದ ಶೇ 25ರ ವರೆಗೂ ಶುಲ್ಕ ವಿಧಿಸಲಾಗುತ್ತದೆ. ಇನ್ನು ಚಿನ್ನದ ಸ್ಕೀಂಗಳಲ್ಲಿ ಮೋಸವಾದರೆ, ಕಟ್ಟಿದ ಹಣವನ್ನು ಆಭರಣ ಮಳಿಗೆಯವರು ವಾಪಸ್ ಕೊಡದಿದ್ದರೆ ಅದನ್ನು ನಿಯಂತ್ರಿಸಲು ಯಾವುದೇ ಸಂಸ್ಥೆಗಳಿಲ್ಲ. ಹೀಗಿರುವಾಗ ದೂರು ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟವಾಗುತ್ತದೆ.
ಸಾರಾಂಶ: ಆಭರಣ ಚಿನ್ನ ಖರೀದಿಗೆ ಶಿಸ್ತುಬದ್ಧವಾಗಿ ಹಣ ಉಳಿತಾಯ ಮಾಡಲಷ್ಟೇ ಗೋಲ್ಡ್ ಸ್ಕೀಂಗಳು ನೆರವಾಗುತ್ತವೆ. ಕೆಲ ಗೋಲ್ಡ್ ಸ್ಕೀಂಗಳಲ್ಲಿ ಪ್ರತಿ ಕಂತಿನ ಹಣ ಸಂದಾಯವಾದಾಗಲೂ ಅವತ್ತಿನ ಚಿನ್ನದ ಬೆಲೆ ಆಧರಿಸಿ ಅಷ್ಟು ಮೌಲ್ಯದ ಚಿನ್ನವನ್ನು ಫಲಾನುಭವಿಯ ಖಾತೆಗೆ ಸೇರಿಸಲಾಗುತ್ತದೆ ಮತ್ತು ಸ್ಕೀಂನಲ್ಲಿ ಇರುವವರಿಗೆ ಮೇಕಿಂಗ್ ಶುಲ್ಕ ಇರುವುದಿಲ್ಲ. ಇಂತಹ ಗೋಲ್ಡ್ ಸ್ಕೀಂಗಳಿಂದ ಸ್ವಲ್ಪ ಅನುಕೂಲವಾಗಬಹುದು.
ಒಟ್ಟಾರೆಯಾಗಿ ನೋಡಿದಾಗ ಬಂಗಾರದ ಮೇಲೆ ಹೂಡಿಕೆ ಮಾಡುತ್ತಿದ್ದೇವೆ ಎಂದುಕೊಂಡು ಗೋಲ್ಡ್ ಸ್ಕೀಂಗಳಲ್ಲಿ ಹಣ ತೊಡಗಿಸಿದರೆ ಯಾವುದೇ ಪ್ರಯೋಜನವಿಲ್ಲ. ಯಾಕೆಂದರೆ ಘನ ರೂಪದ ಚಿನ್ನ ಖರೀದಿ ಹೂಡಿಕೆಯಲ್ಲ. ಹೂಡಿಕೆ ಮಾಡಬೇಕಾದವರು ಸಾವರಿನ್ ಗೋಲ್ಡ್ , ಗೋಲ್ಡ್ ಮ್ಯೂಚುಯಲ್ ಫಂಡ್, ಗೋಲ್ಡ್ ಇಟಿಎಫ್‌ಗಳನ್ನು ಪರಿಗಣಿಸುವುದು ಹೆಚ್ಚು ಅನುಕೂಲಕರ.
ಏಪ್ರಿಲ್ 26ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 73730 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1ರಷ್ಟು ಗಳಿಸಿಕೊಂಡಿದೆ. 22419ರಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.25ರಷ್ಟು ಜಿಗಿದಿದೆ. ಕಂಪನಿಗಳ ತ್ರೈಮಾಸಿಕ ಸಾಧನೆ ವರದಿಯಲ್ಲಿ ಉತ್ತಮ ಫಲಿತಾಂಶ ಇಸ್ರೇಲ್– ಇರಾನ್ ನಡುವಿನ ಬಿಕ್ಕಟ್ಟು ಶಮನಗೊಳ್ಳುವ ಸೂಚನೆ ಸೇರಿ ಹಲವು ಅಂಶಗಳು ಷೇರುಪೇಟೆ ಪುಟಿದೇಳಲು ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ಎಲ್ಲಾ 12 ವಲಯಗಳೂ ಹೆಚ್ಚಳ ಕಂಡಿವೆ. ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 6.63 ರಿಯಲ್ ಎಸ್ಟೇಟ್ ಶೇ 4.62 ಲೋಹ ಶೇ 3.66 ಫಾರ್ಮಾ ಶೇ 5.51 ವಾಹನ ಸೂಚ್ಯಂಕ ಶೇ 2.47 ಎಫ್‌ಎಂಸಿಜಿ ಶೇ 2.35 ಮಾಧ್ಯಮ ಸೂಚ್ಯಂಕ ಶೇ 2.31 ಎನರ್ಜಿ ಶೇ 1.64 ಅನಿಲ ಮತ್ತು ತೈಲ ಶೇ 1.56 ಬ್ಯಾಂಕ್ ಸೂಚ್ಯಂಕ ಶೇ 1.51 ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 1.03 ಮತ್ತು ನಿಫ್ಟಿ ಫೈನಾನ್ಸ್ ಶೇ 1ರಷ್ಟು ಜಿಗಿದಿವೆ. ಗಳಿಕೆ– ಇಳಿಕೆ: ವಾರದ ಅವಧಿಯಲ್ಲಿ ನಿಫ್ಟಿ 50ಯಲ್ಲಿ ಎಕ್ಸಿಸ್ ಬ್ಯಾಂಕ್ ಗರಿಷ್ಠ ಶೇ 9.39ರಷ್ಟು ಗಳಿಕೆ ಕಂಡಿದೆ. ಡಿವೀಸ್ ಲ್ಯಾಬೊರೇಟರೀಸ್ ಶೇ 9.39 ಟೆಕ್ ಮಹೀಂದ್ರ ಶೇ 7.13ರಷ್ಟು ಜಿಗಿದಿವೆ. ಕೋಟಕ್ ಮಹೀಂದ್ರ ಶೇ 10.27 ರಷ್ಟು ಕುಸಿತ ಕಂಡಿದ್ದರೆ ಬಜಾಜ್ ಫೈನಾನ್ಸ್ ಶೇ 7.73ರಷ್ಟು ತಗ್ಗಿದೆ. ಮುನ್ನೋಟ: ಈ ವಾರ ಅಲ್ಟ್ರಾಟೆಕ್ ಸಿಮೆಂಟ್ ಟ್ರೆಂಟ್ ಯುಕೊ ಬ್ಯಾಂಕ್ ಟಾಟಾ ಕೆಮಿಕಲ್ಸ್ ಜಿಲೆಟ್ ಇಂಡಿಯಾ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಕೆ ಫಿನ್ ಟೆಕ್ನಾಲಜೀಸ್ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆರ್‌ಇಸಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹ್ಯಾವೆಲ್ಸ್ ಇಂಡಿಯಾ ಅದಾನಿ ಟೋಟಲ್ ಗ್ಯಾಸ್ ಎಕ್ಸೈಡ್ ಇಂಡಸ್ಟ್ರೀಸ್ ಸಿಂಫನಿ ಅದಾನಿ ಎನರ್ಜಿ ಸಲ್ಯೂಷನ್ಸ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅದಾನಿ ಪವರ್ ಅದಾನಿ ವಿಲ್ಮಾರ್ ಗ್ರೀನ್ ಪ್ಯಾನಲ್ ಇಂಡಸ್ಟ್ರೀಸ್ ಕೋಲ್ ಇಂಡಿಯಾ ಫೆಡರಲ್ ಬ್ಯಾಂಕ್ ಕೆಇಐ ಇಂಡಸ್ಟ್ರೀಸ್ ಡಾಬರ್ ಇಂಡಿಯಾ ಸಿಯೇಟ್ ಟೈಟನ್ ಎಂಆರ್‌ಎಫ್ ರೇಮಂಡ್ ಕೋಟಕ್ ಮಹೀಂದ್ರ ಬ್ಯಾಂಕ್ ಸಿಡಿಎಸ್ಎಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ತ್ರೈಮಾಸಿಕ ವರದಿಗಳು ಹಾಗೂ ಜಾಗತಿಕ ವಿದ್ಯಮಾನಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.