ದೇಶಿ ಆರ್ಥಿಕತೆಯು ವಿಭಿನ್ನ ಕಾರಣಗಳಿಗಾಗಿ ವರ್ಷದುದ್ದಕ್ಕೂ ಸುದ್ದಿಗೆ ಗ್ರಾಸವಾಗಿತ್ತು. 2025ರ ವೇಳೆಗೆ ಭಾರತದ ಅರ್ಥ ವ್ಯವಸ್ಥೆಯನ್ನು ₹ 350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯನ್ನಾಗಿ ಮಾಡುವ ಕನಸಿನ ಬೀಜ ಬಿತ್ತಿದ ವರ್ಷ ಇದು. ವಿಶ್ವದ ಅತಿದೊಡ್ಡ ಆರ್ಥಿಕತೆಯ ಶ್ರೇಯಾಂಕದಲ್ಲಿ ಭಾರತವು 5ನೇ ಸ್ಥಾನದಲ್ಲಿ ಇರುವ ಇಂಗ್ಲೆಂಡ್ ಅನ್ನು ಹಿಂದಿಕ್ಕಲಿದೆ ಎಂದೂ ಭವಿಷ್ಯ ನುಡಿಯಲಾಗಿತ್ತು. ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಎರವಾಗಿ , ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶ್ರೇಯಾಂಕದಲ್ಲಿ 7ನೇ ಸ್ಥಾನಕ್ಕೆ ಇಳಿಯಿತು.
ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣ ಪ್ರಮಾಣದ ಹಣಕಾಸು ಸಚಿವೆಯಾಗಿ ಅಧಿಕಾರವಹಿಸಿಕೊಂಡಿದ್ದರು. ಜಿಎಸ್‌ಟಿ ಸಂಗ್ರಹ, ಆರ್ಥಿಕ ವೃದ್ಧ ದರ ಮತ್ತು ವಾಹನಗಳ ಮಾರಾಟ ಕುಸಿತಕ್ಕೂ ಈ ವರ್ಷ ಸಾಕ್ಷಿಯಾಗಿದೆ. ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ನಡುವಣ ಸುಂಕ ಸಮರವು ವಿಶ್ವದಾದ್ಯಂತ ಆತಂಕದ ಕಂಪನ ಮೂಡಿಸಿತ್ತು.
ಜನವರಿ: ಮೂರು ಬ್ಯಾಂಕ್ ವಿಲೀನಕ್ಕೆ ಸಮ್ಮತಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾದಲ್ಲಿ (ಬಿಒಬಿ), ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳ ವಿಲೀನ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟವು ತನ್ನ ಸಮ್ಮತಿ ನೀಡಿತು.
ಐಎಂಎಫ್: ಗೀತಾ ಗೋಪಿನಾಥ ಅಧಿಕಾರ ಸ್ವೀಕಾರ: ಮೈಸೂರಿನವರಾದ ಗೀತಾ ಗೋಪಿನಾಥ್ (47) ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆಯಾಗಿ ಅಧಿಕಾರ ಸ್ವೀಕಾರ.
ಮೊಬೈಲ್ ವಾಲೆಟ್: ಆರ್‌ಬಿಐ ಹೊಸ ನಿಯಮ: ಮೊಬೈಲ್ ವಾಲೆಟ್‌ನಲ್ಲಿ ಒಂದು ವೇಳೆ ಹಣ ಕಳೆದುಕೊಂಡರೆ ಗ್ರಾಹಕರಿಗೆ ಸೂಕ್ತ ಪರಿಹಾರ ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊಸ ನಿಯಮಾವಳಿಗಳನ್ನು ರೂಪಿಸಿತು.
ಮಿಂತ್ರಾ ಸಿಇಒ ಅನಂತ್ ಪದತ್ಯಾಗ: ಇ–ಕಾಮರ್ಸ್ ಫ್ಲಿಪ್‌ಕಾರ್ಟ್‌ನ ಅಂಗಸಂಸ್ಥೆಗಳಾಗಿರುವ ಮಿಂತ್ರಾ ಮತ್ತು ಜಬಾಂಗ್‌ನ ಸಿಇಒ ಅನಂತ್ ನಾರಾಯಣನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.
ಎಲ್‌ಐಸಿ ಸ್ವಾಧೀನಕ್ಕೆ ಐಡಿಬಿಐ ಬ್ಯಾಂಕ್: ಐಡಿಬಿಐ ಬ್ಯಾಂಕ್‌ನ ಶೇ 51ರಷ್ಟು ಷೇರುಗಳನ್ನು ಎಲ್‌ಐಸಿ ಸ್ವಾಧೀನಪಡಿಸಿಕೊಂಡಿದೆ. 2018ರ ಜೂನ್‌ನಲ್ಲಿ ಸ್ವಾಧೀನ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಚಂದಾ ಕೊಚ್ಚರ್ ತಪ್ಪಿತಸ್ಥೆ: ಐಸಿಐಸಿಐ ಬ್ಯಾಂಕ್‌ನ ನೀತಿ ಸಂಹಿತೆಯನ್ನು ಮಾಜಿ ಸಿಇಒ ಚಂದಾ ಕೊಚ್ಚರ್ ಅವರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಬ್ಯಾಂಕ್ ನೇಮಿಸಿದ್ದ ಬಿ. ಎನ್. ಶ್ರೀಕೃಷ್ಣಾ ಸ್ವತಂತ್ರ ತನಿಖಾ ಸಮಿತಿಯು ವರದಿ ನೀಡಿತು.
ಫೆಬ್ರುವರಿ
ಕೊಚ್ಚರ್ ವಿರುದ್ಧ ಕ್ರಿಮಿನಲ್ ಪ್ರಕರಣ: ಐಸಿಐಸಿಐ ಬ್ಯಾಂಕ್–ವಿಡಿಯೊಕಾನ್ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್, ಪತಿ ದೀಪಕ್ ಕೊಚ್ಚರ್, ವಿಡಿಯೊಕಾನ್ ಸಮೂಹದ ಪ್ರವರ್ತಕ ವೇಣುಗೋಪಾಲ್ ಧೂತ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಕ್ರಿಮಿನಲ್ ಪ್ರಕರಣ ದಾಖಲು.
ಉದ್ದಿಮೆಗಳ ಉಡುಗಿದ ಉತ್ಸಾಹ: ಆರ್‌ಬಿಐ ಸಮೀಕ್ಷೆ: ದೇಶದ ಪ್ರಮುಖ ಸರಕು ತಯಾರಿಕಾ ಉದ್ದಿಮೆಗಳಲ್ಲಿ ವಹಿವಾಟಿಗೆ ಸಂಬಂಧಿಸಿದ ಉತ್ಸಾಹ ಕಡಿಮೆಯಾಗಿರುವುದು ಭಾರತೀಯ ರಿಸರ್ವ್ ಬ್ಯಾಂಕ್‌ನ ಸಮೀಕ್ಷೆಯಲ್ಲಿ ಬಹಿರಂಗ.
ಜಾಗತಿಕ ಆರ್ಥಿಕ ಬಿರುಗಾಳಿ: ಐಎಂಎಫ್ ಎಚ್ಚರಿಕೆ: ಸಂಭವನೀಯ ‘ಆರ್ಥಿಕ ಬಿರುಗಾಳಿ’ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಜಾಗತಿಕ ಸಮುದಾಯಕ್ಕೆ ನೀಡಿದ ಎಚ್ಚರಿಕೆ.
ಅಮೆಜಾನ್‌ಗೆ ಇಂದ್ರಾ ನೂಯಿ ನೇಮಕ: ಪೆಪ್ಸಿಕೊದ ಮಾಜಿ ಸಿಇಒ ಆಗಿರುವ ಭಾರತದ ಸಂಜಾತೆ ಇಂದ್ರಾ ನೂಯಿ, ಇ–ಕಾಮರ್ಸ್‌ನ ದೈತ್ಯ ಸಂಸ್ಥೆ ಅಮೆಜಾನ್ ನಿರ್ದೇಶಕ ಮಂಡಳಿಗೆ ಸೇರ್ಪಡೆ.
ಮಾರ್ಚ್
₹ 1.45 ಲಕ್ಷ ಕೋಟಿಗೆ ತಲುಪಿದ ಅಜೀಂ ಪ್ರೇಮ್‌ಜಿ ಕೊಡುಗೆ: ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆ ವಿಪ್ರೊದ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಸಂಸ್ಥೆಯಲ್ಲಿನ ತಮ್ಮ ಪಾಲು ಬಂಡವಾಳದ ಶೇ 34ರಷ್ಟನ್ನು ದತ್ತಿ ಕಾರ್ಯಕ್ರಮಗಳಿಗೆ ನೀಡಲು ನಿರ್ಧಾರ.
ರೆಪೊ ಆಧರಿಸಿ ಸಾಲ; ಎಸ್‌ಬಿಐ: ಆರ್‌ಬಿಐನ ರೆಪೊ ದರ ಆಧರಿಸಿ ಉಳಿತಾಯ ಠೇವಣಿ ದರ ಮತ್ತು ಅಲ್ಪಾವಧಿ ಸಾಲದ ಬಡ್ಡಿ ದರ ನಿಗದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ನಿರ್ಧಾರ.
ಅನಿಲ್ ಅಂಬಾನಿಗೆ ತಪ್ಪಿದ ಜೈಲು ಶಿಕ್ಷೆ: ಸ್ವೀಡನ್ನಿನ ದೂರಸಂಪರ್ಕ ಸಲಕರಣೆ ತಯಾರಿಕಾ ಸಂಸ್ಥೆ ಎರಿಕ್ಸನ್‌ಗೆ ₹ 462 ಕೋಟಿ ಮೊತ್ತದ ಬಾಕಿ ಪಾವತಿಸಿದ್ದರಿಂದ ಕೊನೆಗಳಿಗೆಯಲ್ಲಿ 3 ತಿಂಗಳ ಜೈಲು ಶಿಕ್ಷೆಯಿಂದ ಪಾರಾದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಂ) ಅಧ್ಯಕ್ಷ ಅನಿಲ್ ಅಂಬಾನಿ.
ಜೆಟ್ ಏರ್‌ವೇಸ್ ಸ್ಥಗಿತ: ಹಣಕಾಸು ಬಿಕ್ಕಟ್ಟಿಗೆ ಗುರಿಯಾದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್‌ಗೆ ಸಾಲ ನೀಡಿರುವ ಬ್ಯಾಂಕ್‌ಗಳಿಂದ ಕಂಪನಿಯ ಆಡಳಿತ ನಿಯಂತ್ರಣ ವಶಕ್ಕೆ ಪಡೆಯಲು ಯತ್ನ.
ಮೈಂಡ್‌ಟ್ರೀ ಸ್ವಾಧೀನಕ್ಕೆ ಗಮನ: ಬೆಂಗಳೂರಿನ ಮಧ್ಯಮ ಗಾತ್ರದ ಐ.ಟಿ ಸಂಸ್ಥೆ ಮೈಂಡ್‌ಟ್ರೀಯನ್ನು ಒತ್ತಾಯಪೂರ್ವಕವಾಗಿ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಎಂಜಿನಿಯರಿಂಗ್ ಸಂಸ್ಥೆ ಲಾರ್ಸನ್ ಆ್ಯಂಡ್ ಟುಬ್ರೊ (ಎಲ್‌ಆ್ಯಂಡ್‌ಟಿ) ಯಶಸ್ವಿ.
ಎರಡು ಗ್ರಾಮೀಣ ಬ್ಯಾಂಕ್ ವಿಲೀನ: ಕಾವೇರಿ ಗ್ರಾಮೀಣ ಬ್ಯಾಂಕ್ ಮತ್ತು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನ. ರಾಜ್ಯದಲ್ಲಿನ ಮೂರು ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ ಎರಡಕ್ಕೆ ಇಳಿಕೆ.
ಏಪ್ರಿಲ್:ತಲ್ಲಣ ಮೂಡಿಸಿದ ವಾಣಿಜ್ಯ ಸಮರ: ವಿಶ್ವದಾದ್ಯಂತ ಆತಂಕದ ಕಂಪನ ಮೂಡಿಸಿದ ಅಮೆರಿಕ ಮತ್ತು ಚೀನಾ ನಡುವಣ ಸುಂಕ ಸಮರ.
ಮೇ
ಐಟಿಸಿಗೆ ಶಕ್ತಿ ತುಂಬಿದ್ದ ದೇವೇಶ್ವರ್ ನಿಧನ: ಸಿಗರೇಟ್ ವಹಿವಾಟಿಗಷ್ಟೇ ಸೀಮಿತವಾಗಿದ್ದ ‘ಇಂಡಿಯಾ ಟೊಬ್ಯಾಕೊ ಕಂಪನಿ’ಯನ್ನು (ಐಟಿಸಿ) ದೇಶದ ಅತಿದೊಡ್ಡ ಬಹುಬಗೆಯ ವಹಿವಾಟಿನ ವಾಣಿಜ್ಯೋದ್ಯಮ ಸಂಸ್ಥೆಯನ್ನಾಗಿ ಅಭಿವೃದ್ಧಿಪಡಿಸಿದ್ದ ಯೋಗೇಶ್ ಚಂದ್ರ ದೇವೇಶ್ವರ್ ನಿಧನ.
ಜಿಡಿಪಿ ಹೆಚ್ಚಳ; ಹೊಸ ಅನುಮಾನ: ದೇಶದ ಆರ್ಥಿಕ ವೃದ್ಧಿ (ಜಿಡಿಪಿ) ದರದ ಬಗ್ಗೆ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್‌ಎಸ್‌ಎಸ್‌ಒ) ನಡೆಸಿದ ಅಧ್ಯಯನದಲ್ಲಿ ಆರ್ಥಿಕ ವೃದ್ಧಿ ದರ ಲೆಕ್ಕ ಹಾಕುವಲ್ಲಿ ಗಮನಾರ್ಹ ದೋಷಗಳು ಇರುವುದು ಪತ್ತೆ.
ವಾಹನ ಮಾರಾಟ ಕುಸಿತ: ದೇಶಿ ವಾಹನ ತಯಾರಿಕಾ ಉದ್ದಿಮೆಯಲ್ಲಿ ತೀವ್ರಗೊಂಡ ಮಾರಾಟ ಕುಸಿತದ ಬಿಕ್ಕಟ್ಟು. ಏಪ್ರಿಲ್‌ನಲ್ಲಿ ಪ್ರಯಾಣಿಕರ ವಾಹನ ಮಾರಾಟವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.7ರಷ್ಟು ಕುಸಿತ.
ಇಂಡಿಗೊ ಪ್ರವರ್ತಕರಲ್ಲಿ ಒಡಕು: ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಪ್ರವರ್ತಕರಾದ ರಾಹುಲ್ ಭಾಟಿಯಾ ಮತ್ತು ರಾಕೇಶ್ ಗಂಗ್ವಾಲ್ ಮಧ್ಯೆ ತಲೆದೋರಿದ ಭಿನ್ನಾಭಿಪ್ರಾಯ.
ಜೂನ್
ಮೊದಲ ಹಣಕಾಸು ಸಚಿವೆ; ನಿರ್ಮಲಾ ಹೆಗ್ಗಳಿಕೆ: ಮೊರಾಜ್ಯಸಭೆಯಲ್ಲಿ ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಸೀತಾ ರಾಮನ್ (59) ಅವರು, ದೇಶದ ಮೊದಲ ಹಣಕಾಸು ಸಚಿವೆ ಎನ್ನುವ ಅಭಿವಾದನಕ್ಕೆ ಪಾತ್ರ.
ವಿಪ್ರೊ;ಅಜೀಂ ಪ್ರೇಮ್‌ಜಿ ನಿವೃತ್ತಿ: ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸೇವಾ ಸಂಸ್ಥೆಯಾಗಿರುವ ವಿಪ್ರೊದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಅಜೀಂ ಪ್ರೇಮ್‌ಜಿ ಅವರ ನಿವೃತ್ತಿ ಘೋಷಣೆ
ನಿರ್ಮಲಾ ಎದುರಿನ ಸವಾಲು: ದೇಶಿ ಆರ್ಥಿಕತೆ ವ್ಯಾಪಿಸಿಕೊಂಡಿರುವ ಹಲವಾರು ಸಿಕ್ಕುಗಳನ್ನು ತುರ್ತಾಗಿ ಬಿಡಿಸುವ ಗುರುತರ ಜವಾಬ್ದಾರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಗಲ ಮೇಲೆ.
ಜಾಗತಿಕ ಆರ್ಥಿಕ ಹಿಂಜರಿತದ ಆತಂಕ; ತೀವ್ರಗೊಂಡ ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಹಾಗೂ ಏಷ್ಯಾ, ಯುರೋಪ್‌ನಲ್ಲಿ ಕೈಗಾರಿಕಾ ಉತ್ಪಾದನೆ ಕುಸಿತ. ಜಾಗತಿಕ ಆರ್ಥಿಕ ಹಿಂಜರಿತದ ಆತಂಕ ಹೆಚ್ಚಳ
ವಿರಲ್ ಆಚಾರ್ಯ ರಾಜೀನಾಮೆ: ಭಾರತೀಯ ರಿಸರ್ವ್ ಬ್ಯಾಂಕ್‌ನ ಸ್ವಾಯತ್ತತೆಯ ಪ್ರಬಲ ಪ್ರತಿಪಾದಕರಾಗಿದ್ದ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ (45) ತಮ್ಮ ಮೂರು ವರ್ಷಗಳ ಅಧಿಕಾರಾವಧಿ ಮುಗಿಯುವುದಕ್ಕೂ ಮೊದಲೇ ದಿಢೀರ್ ರಾಜೀನಾಮೆ.
ಜುಲೈ
ಉದ್ಯಮಿ ಬಿ. ಕೆ. ಬಿರ್ಲಾ ನಿಧನ: ದೇಶಿ ಕೈಗಾರಿಕಾ ರಂಗದ ದಿಗ್ಗಜರಾಗಿದ್ದ ಬಿರ್ಲಾ ಸಮೂಹದ ಮುಖ್ಯಸ್ಥ ಬಿ. ಕೆ. ಬಿರ್ಲಾ (98) ನಿಧನ.
ಏರ್ ಇಂಡಿಯಾ ಮಾರಾಟಕ್ಕೆ ಸಮಿತಿ: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದ (ಎಐ) ಷೇರು ವಿಕ್ರಯಕ್ಕೆ ಸಂಬಂಧಿಸಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಚಿವರ ಸಮಿತಿ ಪುನರ್‌ರಚನೆ.
ಐಎಂಎಫ್ ಹುದ್ದೆಗೆ ಲಗಾರ್ಡ್ ರಾಜೀನಾಮೆ: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಗೆ ಕ್ರಿಸ್ಟಿನ್ ಲಗಾರ್ಡ್ ರಾಜೀನಾಮೆ.
ಆಗಸ್ಟ್
ಕಾಫಿ ಡೇ ಎಂಟರ್‌ಪ್ರೈಸಿಸ್ ಸಮೂಹದ ಉದ್ಯಮ ಪ್ರವರ್ತಕ ವಿ. ಜಿ. ಸಿದ್ಧಾರ್ಥ ಆತ್ಮಹತ್ಯೆ
ಸುಬೀರ್ ಗೋಕರ್ಣ ನಿಧನ: ಖ್ಯಾತ ಆರ್ಥಿಕ ತಜ್ಞ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಡೆಪ್ಯುಟಿ ಗವರ್ನರ್ ಆಗಿದ್ದ ಸುಬೀರ್ ಗೋಕರ್ಣ (60) ನಿಧನ.
ಆರ್ಥಿಕತೆಯ ಶ್ರೇಯಾಂಕ ಕುಸಿತ: ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಎನ್ನುವ ಹೆಗ್ಗಳಿಕೆಗೆ ಎರವಾದ ಭಾರತ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶ್ರೇಯಾಂಕದಲ್ಲಿ 7ಕ್ಕೆ ಇಳಿಕೆ.
ದುಬಾರಿ ಚಿನ್ನ: ಪ್ರಮುಖ ಚಿನಿವಾರ ಪೇಟೆಗಳಲ್ಲಿ ಪ್ರತಿ 10 ಗ್ರಾಂಗಳಿಗೆ ₹ 40 ಸಾವಿರದ ಸಮೀಪಕ್ಕೆ ತಲುಪಿದ ಚಿನ್ನದ ಧಾರಣೆ.
ನಗದು ಚಲಾವಣೆ ಹೆಚ್ಚಳ: ಶೇ 17ರಷ್ಟು ಹೆಚ್ಚಳ ದಾಖಲಿಸಿದ ನಗದು ಚಲಾವಣೆ. ₹ 21.10 ಲಕ್ಷ ಕೋಟಿ ಮೊತ್ತದ ನೋಟುಗಳು ಚಲಾವಣೆಯಲ್ಲಿ.
ಮೈಸೂರಿನ ಇಂಕ್ ತಯಾರಿಕಾ ಘಟಕ: ನೋಟುಗಳನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸುವ ನಿಟ್ಟಿನಲ್ಲಿನ ಪ್ರಮುಖ ಹೆಜ್ಜೆಯಾಗಿ ಮೈಸೂರಿನಲ್ಲಿ ಸ್ಥಾಪಿಸಿರುವ ಇಂಕ್ ತಯಾರಿಕಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆ ಆರಂಭ.
ಎಟಿಎಂ ವಹಿವಾಟಿಗೆ ‘ಒಟಿಪಿ’ : ಎಟಿಎಂಗಳಿಂದ ನಗದು ಪಡೆಯುವುದನ್ನು ಹೆಚ್ಚು ಸುರಕ್ಷಿತಗೊಳಿಸಲು ಕೆನರಾ ಬ್ಯಾಂಕ್, ಮೊಬೈಲ್‌ಗೆ ಒಂದು ಬಾರಿಗೆ ರಹಸ್ಯ ಸಂಖ್ಯೆ (ಒಟಿಪಿ) ಕಳಿಸುವ ಸೌಲಭ್ಯ ಜಾರಿಗೆ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.