ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಪಿಎಂ ಇಂಟರ್ನ್‌ಶಿಪ್ ಯೋಜನೆಯಡಿ ಶುಕ್ರವಾರದವರೆಗೆ 193 ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಇದರಿಂದ 90,800 ಯುವಜನರಿಗೆ ವಿವಿಧ ವೃತ್ತಿ ತರಬೇತಿ ದೊರೆಯಲಿದೆ.
ಜುಬಿಲೆಂಟ್ ಫುಡ್‌ವರ್ಕ್ಸ್, ಮಾರುತಿ ಸುಜುಕಿ ಇಂಡಿಯಾ, ಐಷರ್ ಮೋಟರ್, ಎಲ್ ಆ್ಯಂಡ್ ಟಿ, ಮುತ್ತೂಟ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರಿಸ್ ನೋಂದಣಿ ಮಾಡಿಕೊಂಡಿರುವ ಪ್ರಮುಖ ಕಂಪನಿಗಳಾಗಿವೆ. ಈ ಯೋಜನೆಯ ಪೋರ್ಟಲ್‌ನಲ್ಲಿ ಶನಿವಾರದಿಂದ ಯುವಜನರ ನೋಂದಣಿ ಆರಂಭವಾಗಿದೆ.
ಡಿಸೆಂಬರ್‌ನಿಂದ ಆರಂಭಗೊಳ್ಳಲಿರುವ ಈ ಪ್ರಾಯೋಗಿಕ ಯೋಜನೆಗೆ ಕೇಂದ್ರವು ₹800 ಕೋಟಿ ಅನುದಾನ ನಿಗದಿಪಡಿಸಿದೆ. ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ 1.25 ಲಕ್ಷ ಯುವಜನರಿಗೆ ಇಂಟರ್ನ್‌ಶಿಪ್ ನೀಡುವ ಗುರಿ ಹೊಂದಲಾಗಿದೆ.
ತೈಲ, ಅನಿಲ ಮತ್ತು ಎನರ್ಜಿ, ಪ್ರವಾಸ ಮತ್ತು ಆತಿಥ್ಯ, ಬ್ಯಾಂಕಿಂಗ್, ಹಣಕಾಸು ಸೇವಾ ವಲಯಕ್ಕೆ ಸೇರಿರುವ ಕಂಪನಿಗಳು ಸದ್ಯ ಹೆಚ್ಚಾಗಿ ನೋಂದಣಿ ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ಉತ್ಪಾದನೆ ಮತ್ತು ತಯಾರಿಕೆ, ನಿರ್ವಹಣೆ, ಮಾರಾಟ ಮತ್ತು ಮಾರುಕಟ್ಟೆ ಸೇರಿ 20ಕ್ಕೂ ಹೆಚ್ಚು ವಲಯಗಳಲ್ಲಿ ಯುವಜನರಿಗೆ ಇಂಟರ್ನ್‌ಶಿಪ್ ನೀಡುವ ಗುರಿ ಹೊಂದಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ 737 ಜಿಲ್ಲೆಗಳಲ್ಲಿ ಯುವಜನರಿಗೆ ವಿವಿಧ ವೃತ್ತಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿವೆ.
ಈ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ ಒಂದು ಕೋಟಿ ಯುವಜನರಿಗೆ ಇಂಟರ್ನ್‌ಶಿಪ್ ನೀಡುವುದು ಕೇಂದ್ರದ ಗುರಿಯಾಗಿದೆ. ಆಯ್ಕೆಯಾದವರಿಗೆ ಪ್ರತಿ ಮಾಸಿಕ ₹5 ಸಾವಿರ ಭತ್ಯೆ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.