ಮುಂಬೈ: ‘ಜಾಗತಿಕ ಸವಾಲುಗಳ ನಡುವೆಯೂ 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಸರಕು ಮತ್ತು ಸೇವಾ ರಫ್ತು ಮೌಲ್ಯವು ₹66.68 ಲಕ್ಷ ಕೋಟಿ ದಾಟಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರಳು ಮತ್ತು ಚಿನ್ನಾಭರಣಗಳ ರಫ್ತುದಾರರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2023–24ನೇ ಆರ್ಥಿಕ ವರ್ಷದಲ್ಲಿ ₹64.85 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು ಎಂದರು.
‘ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಕಠಿಣ ಪರಿಸ್ಥಿತಿ ಇದೆ. ಉಕ್ರೇನ್–ರಷ್ಯಾ ಮತ್ತು ಇಸ್ರೇಲ್–ಹಮಾಸ್ ನಡುವಿನ ಯುದ್ಧ ಮುಕ್ತಾಯಗೊಂಡಿಲ್ಲ. ಅಲ್ಲದೆ, ಕೆಂಪು ಸಮುದ್ರದ ಬಿಕ್ಕಟ್ಟು ಶಮನಗೊಂಡಿಲ್ಲ. ಜನತಂತ್ರ ವ್ಯವಸ್ಥೆ ಹೊಂದಿರುವ ಯುರೋಪ್‌ನ ಕೆಲವು ರಾಷ್ಟ್ರಗಳಲ್ಲಿ ಚುನಾವಣೆಗಳು ನಡೆಯುತ್ತಿವೆ’ ಎಂದು ಹೇಳಿದರು.
‘ಇಂತಹ ಪರಿಸ್ಥಿತಿ ನಡುವೆಯೂ ದೇಶದ ರಫ್ತು ವಹಿವಾಟು ಹೆಚ್ಚುತ್ತಿದೆ. ಮೇ ತಿಂಗಳಿನಲ್ಲಿ ಶೇ 9ರಷ್ಟು ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ. ಇಡೀ ವಿಶ್ವವೇ ಭಾರತದಲ್ಲಿ ವ್ಯಾಪಾರ ಮತ್ತು ಹೂಡಿಕೆಗೆ ಇಚ್ಛಿಸುತ್ತಿದೆ. ಹಾಗಾಗಿ, ನಿರೀಕ್ಷಿತ ಗುರಿ ಸಾಧನೆಯಾಗಲಿದೆ’ ಎಂದು ಹೇಳಿದರು.
ರಫ್ತು ಪ್ರಮಾಣದಲ್ಲಿ ಹೆಚ್ಚಳ ಹಾಗೂ ತಯಾರಿಕಾ ವಲಯದ ಬೆಳವಣಿಗೆಯಿಂದಾಗಿ ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ತಗ್ಗಿತ್ತು ಎಂದರು.
ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡಿದರೆ ಕಚ್ಚಾ ತೈಲದ ಆಮದು ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಿಳಿಸಿದರು.
ರಫ್ತು ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಂಬಾರ ಪದಾರ್ಥಗಳು, ರಬ್ಬರ್, ತಂಬಾಕು, ಚಹಾ ಹಾಗೂ ಕಾಫಿ ಮಂಡಳಿಯ ಜೊತೆಗೆ ಸಚಿವಾಲಯವು ಸರಣಿ ಸಭೆ ನಡೆಸುತ್ತಿದೆ ಎಂದು ಹೇಳಿದರು.
ಸಚಿವಾಲಯ, ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಮಂಡಳಿಯು, ಯುರೋಪಿಯನ್ ಒಕ್ಕೂಟ ಮತ್ತು ಜಿ7 ರಾಷ್ಟ್ರಗಳ ನಡುವೆ ನಿರಂತರ ಸಂಪರ್ಕ ಹೊಂದಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.